ADVERTISEMENT

ನೂರು ವರ್ಷ ಹಿಂದಿನ ಒಲಿಂಪಿಕ್ಸ್‌ ತಾಣದಲ್ಲಿ ನೆನಪಿನ ಬುತ್ತಿ....

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:15 IST
Last Updated 22 ಜುಲೈ 2024, 18:15 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಪ್ಯಾರಿಸ್‌ (ಎಎಫ್‌ಪಿ): ಸರಿಯಾಗಿ ನೂರು ವರ್ಷಗಳ ನಂತರ ಒಲಿಂಪಿಕ್ಸ್‌ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ  ಮರಳಿದೆ. ಆದರೆ ಅಂದು ಬಳಕೆಯಾದ ಕ್ರೀಡಾಂಗಣದಲ್ಲಿ ಕೆಲವು ಈಗಲೂ ಅಸ್ತಿತ್ವದಲ್ಲಿವೆ. ಆದರೆ  ಅವುಗಳನ್ನು ಬಳಸಲಾಗುತ್ತಿಲ್ಲ. ದೇಶದ ಕ್ರೀಡಾ ದಿಗ್ಗಜರ ಹೆಸರನ್ನು ಇವು ಹೊಂದಿವೆ.

ನಗರದ ಉತ್ತರ ಭಾಗದಲ್ಲಿರುವ ಕೊಲಂಬೆಸ್‌ನಲ್ಲಿ ಆಗಿನ ಕಾಲದಲ್ಲಿ ಮುಖ್ಯ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಇಲ್ಲಿಯೇ ಕ್ರೀಡಾ ಗ್ರಾಮವೂ ಇತ್ತು. ಈಗ ಇಲ್ಲಿ ಪುನರ್‌ವಿನ್ಯಾಸಗೊಳಿಸಿರುವ ಕ್ರೀಡಾಂಗಣ ಹಾಕಿಗೆ ಬಳಕೆಯಾಗಲಿದೆ.

ಖಾಸಗಿ ರೇಸಿಂಗ್‌ ಕ್ಲಬ್‌ಗೆ ಈ ಜಾಗ ಸೇರಿತ್ತು. ಈ ಜಮೀನಿನಲ್ಲಿ 60 ಸಾವಿರ ಮಂದಿಗೆ ಅವಕಾಶವಿರುವ ಕ್ರೀಡಾಂಗಣ ನಿರ್ಮಿಸಲು ಕ್ಲಬ್‌ ಒಪ್ಪಿಕೊಂಡಿತು. ಇದಕ್ಕಾಗಿ ತಗುಲಿದ ವೆಚ್ಚವನ್ನು ಒಲಿಂಪಿಕ್ಸ್‌ನಿಂದ ಬಂದ ಹಣದಿಂದ ನೀಡುವಂತೆ ಕೇಳಿತ್ತು ಎಂದು ಇತಿಹಾಸಕಾರ ಮೈಕೆಲ್‌ ಡೆಲಿಪೈನ್‌ ಅವರು ಕ್ರೀಡಾಂಗಣದ ಬಗ್ಗೆ ಬರೆದಿರುವ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ADVERTISEMENT

ಇದೇ ತಾಣದಲ್ಲಿ ಬ್ರಿಟಿಷ್‌ ಸ್ಪ್ರಿಂಟರ್‌ಗಳಾದ ಹೆರಾಲ್ಡ್ ಅಬ್ರಹಾಮ್ಸ್ ಮತ್ತು ಎರಿಕ್‌ ಲಿಡ್ಡೆಲ್‌ ನಡುವಣ ನಡೆದ ತುರುಸಿನ ಓಟ ‘ಚಾರಿಯಟ್ಸ್‌ ಆಫ್‌ ಫೈರ್‌’ ಹಾಲಿವುಡ್‌ ಸಿನಿಮಾಕ್ಕೆ ವಸ್ತುವಾಯಿತು. ಲಾಂಗ್‌ಜಂಪ್‌ನಲ್ಲಿ ಅಗ್ರಸ್ಥಾನ ಪಡೆದ ಡೆಹಾರ್ಟ್‌ ಹಬ್ಬರ್ಡ್‌ ಅವರು ಒಲಿಂಪಿಕ್‌ ಚಿನ್ನ ಗೆದ್ದ ಅಮೆರಿಕದ ಮೊದಲ ಕಪ್ಪುವರ್ಣೀಯ ಅಥ್ಲೀಟ್‌ ಎನಿಸಿದರು. ಈ ಕ್ರೀಡಾಂಗಣಕ್ಕೆ ನಂತರ ರೇಸಿಂಗ್‌ ರಗ್ಬಿ ತಾರೆ ಈವ್ಸ್ ಡು ಮನೊಯಿ ಅವರ ಹೆಸರಿಡಲಾಯಿತು. ಇದೇ ಕ್ರೀಡಾಂಗಣದಲ್ಲಿ ಬ್ರೆಜಿಲ್ ದಂತಕತೆ ಪೆಲೆ ಅವರು 1963ರಲ್ಲಿ ಫ್ರಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದರು.

ಈ ಕ್ರೀಡಾಂಗಣದ ಆಚೆಯಿರುವ ಪಿಸೈನ್ ಡೆಸ್‌ ಟೂರ್ಲೆಯ ಈಜುಕೊಳದಲ್ಲಿ ಅಮೆರಿಕದ ಈಜುತಾರೆ ಜಾನಿ ವೀಸ್‌ಮುಲ್ಲರ್ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. ಅವರು ನಂತರ ಟಾರ್ಜನ್‌ ಸಿನಿಮಾಗಳಲ್ಲಿ ನಾಯಕನಾಗಿ ಪ್ರಸಿದ್ಧಿ ಪಡೆದರು. ಈ ಈಜುಕೊಳಕ್ಕೆ ಜಾರ್ಜಸ್‌ ವಲ್ಲರೆ ಹೆಸರು ಇಡಲಾಗಿದೆ. ಹಲವು ವರ್ಷಗಳ ಕಾಲ ಫ್ರಾನ್ಸ್ ಈಜು ಫೆಡರೇಷನ್‌ನ ಪ್ರಧಾನ ಕಚೇರಿ ಇಲ್ಲಿತ್ತು. ಈ ಬಾರಿ ಇದನ್ನು ನವೀಕರಿಸಿದ್ದು, ಒಲಿಂಪಿಕ್ಸ್‌ ಈಜುಪಟುಗಳಿಗೆ ತಾಲೀಮು ನಡೆಸಲು ಬಳಕೆಯಾಗಲಿದೆ.

ಆದರೆ ನಗರದ ಈಶಾನ್ಯ ಭಾಗದ ನಯನಮನೋಹರ ಗಿರಿಯ ಮೇಲಿದ್ದ ಫುಟ್‌ಬಾಲ್‌ ಕ್ರೀಡಾಂಗಣ ಈಗ ಪಾಳುಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.