ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಫೈನಲ್‌ ಮೇಲೆ ಮನ್‌ಪ್ರೀತ್ ಪಡೆ ಕಣ್ಣು

ಜಪಾನ್ ಎದುರಿನ ಸೆಮಿಫೈನಲ್ ಪಂದ್ಯ

ಪಿಟಿಐ
Published 20 ಡಿಸೆಂಬರ್ 2021, 13:01 IST
Last Updated 20 ಡಿಸೆಂಬರ್ 2021, 13:01 IST
ಭಾರತ ತಂಡದ ಆಟಗಾರರು– ಎಎಫ್‌ಪಿ ಚಿತ್ರ
ಭಾರತ ತಂಡದ ಆಟಗಾರರು– ಎಎಫ್‌ಪಿ ಚಿತ್ರ   

ಢಾಕಾ: ನಿಧಾನಗತಿಯ ಆರಂಭ ಪಡೆದು ಭರ್ಜರಿ ಲಯದೊಂದಿಗೆ ಮುನ್ನುಗ್ಗಿರುವ ಹಾಲಿ ಚಾಂಪಿಯನ್‌ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಂಗಳವಾರ ಜಪಾನ್ ಸವಾಲು ಎದುರಿಸಲಿದೆ.

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್ ವಿರುದ್ಧ ಟೂರ್ನಿಯ ಕೊನೆಯ ಲೀಗ್ ಪಂದ್ಯ ಆಡಿದ್ದ ಮನ್‌ಪ್ರೀತ್ ಸಿಂಗ್‌ ಪಡೆ 6–0ಯಿಂದ ಜಯ ಸಾಧಿಸಿತ್ತು. ಹೀಗಾಗಿ ಫೈನಲ್‌ ತಲುಪುವ ಹಾದಿಯಲ್ಲಿ ತುಸು ಹೆಚ್ಚೇ ಆತ್ಮವಿಶ್ವಾಸದಲ್ಲಿದೆ. ಆದರೂ ಎಚ್ಚರಿಕೆಯಿಂದ ಆಡುವುದು ಅಗತ್ಯವಾಗಿದೆ.

ಐದು ತಂಡಗಳ ಟೂರ್ನಿಯ ರೌಂಡ್‌ ರಾಬಿನ್ ಲೀಗ್ ಹಂತವನ್ನು ಭಾರತ 10 ಪಾಯಿಂಟ್ಸ್‌ ಗಳಿಸಿ ಮೊದಲ ಸ್ಥಾನದೊಂದಿಗೆ ಕೊನೆಗೊಳಿಸಿತ್ತು.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ ಬಳಿಕ ಮೊದಲ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಭಾರತ, ಮೊದಲ ಪಂದ್ಯದಲ್ಲಿ 2–2ರಿಂದ ಕೊರಿಯಾದೊಂದಿಗೆ ಡ್ರಾ ಸಾಧಿಸಿತ್ತು. ಆದರೆ ಬಳಿಕ ಬಾಂಗ್ಲಾದೇಶ ವಿರುದ್ಧ 9–0ಯಿಂದ, ಪಾಕಿಸ್ತಾನ ಎದುರು 3–1ರಿಂದ ಗೆಲುವು ಸಾಧಿಸಿತ್ತು.

ಜಪಾನ್ ಎದುರಿನ ಲೀಗ್ ‍ಪಂದ್ಯದಲ್ಲಿ ಎರಡು ಗೋಲು ಗಳಿಸಿ ಮಿಂಚಿರುವ ಹರ್ಮನ್‌ಪ್ರೀತ್‌, ಸಹಜವಾಗಿಯೇ ತಂಡದ ಶಕ್ತಿಯಾಗಿದ್ದಾರೆ. ಮನ್‌ಪ್ರೀತ್‌ ಹಾಗೂ ಹಾರ್ದಿಕ್‌ ಸಿಂಗ್ ಅವರನ್ನೊಳಗೊಂಡ ಮಿಡ್‌ಫೀಲ್ಡ್‌ ಕೂಡ ಬಲಿಷ್ಠವಾಗಿದೆ.

ಕೆಲವು ಸೊಗಸಾದ ಫೀಲ್ಡ್‌ ಗೋಲುಗಳನ್ನು ದಾಖಲಿಸಿರುವ ದಿಲ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಆಕಾಶ್‌ದೀಪ್ ಸಿಂಗ್ ಮತ್ತು ಶಂಷೇರ್‌ ಸಿಂಗ್ ಅವರ ಫಾರ್ವರ್ಡ್‌ ಆಟಗಾರರ ಬಳಗ ಕೂಡ ಉತ್ತಮವಾಗಿದೆ. ನಿಯಮಿತ ಗೋಲ್‌ಕೀಪರ್ ಪಿ.ಆರ್‌. ಶ್ರೀಜೇಶ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಯುವ ಆಟಗಾರ ಸೂರಜ್ ಕರ್ಕೇರಾ ಅದ್ಭುತ ಸಾಮರ್ಥ್ಯ ತೋರುತ್ತಿದ್ದಾರೆ.

ಆದಾಗ್ಯೂ, ಭಾರತದ ಡಿಫೆನ್ಸ್ ವಿಭಾಗವು ಮಂಗಳವಾರ ಸ್ವಲ್ಪ ಹೆಚ್ಚು ಜಾಗರೂಕವಾಗಬೇಕಿದೆ. ಹೆಚ್ಚಿನ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಡದಿರಲು ಗಮನಹರಿಸಿದರೆ ಗೆಲುವು ಸುಲಭವಾಗಬಹುದು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಕೊರಿಯಾ ಎದುರು ಆಡಲಿದೆ.

ಪಂದ್ಯ ಆರಂಭ: ಸಂಜೆ 6

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ಪಾಕಿಸ್ತಾನ–ದಕ್ಷಿಣ ಕೊರಿಯಾ

ಆರಂಭ: ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.