ಉಡುಪಿ: ಬೆಂಗಳೂರಿನ ಪ್ರಥಮೇಶ್ ದೇಶ್‌ಮುಖ್ ಮತ್ತು ಆದಿತ್ಯ ರಂಜನ್ ಸಾಹು ಅವರು ಪಡುಬಿದ್ರಿಯ ಕಾಪುವಿನಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ಫಿಡೆ ರೇಟೆಡ್ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ಮುಕ್ತ ವಿಭಾಗದಲ್ಲಿ ಅಗ್ರಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವಾ ಮುನ್ನಡೆಯಲ್ಲಿದ್ದಾರೆ.
ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ಮುಕ್ತಾಯಕ್ಕೆ ಪ್ರಥಮೇಶ್ ಮತ್ತು ಆದಿತ್ಯ ತಲಾ 5.5 ಪಾಯಿಂಠ್ ತಮ್ಮದಾಗಿಸಿಕೊಂಡಿದ್ದಾರೆ.
ಮುಕ್ತ ವಿಭಾಗದಲ್ಲಿ ಮೊದಲ ದಿನ ಅಗ್ರ ಸ್ಥಾನದಲ್ಲಿದ್ದ ಮೈಸೂರಿನ ಈಶ್ವರ್ ವೀರಪ್ಪನ್ ಅಯ್ಯಪ್ಪನ್ ವಿರುದ್ಧ ಐದನೇ ಸುತ್ತಿನಲ್ಲಿ ಜಯ ಗಳಿಸಿದ ಪ್ರಥಮೇಶ್ ಅದಕ್ಕೂ ಮೊದಲು ಬೆಂಗಳೂರಿನ ಸಮಂತ್ ಎದುರು ಗೆಲುವು ಸಾಧಿಸಿದ್ದರು. ದಿನದ ಕೊನೆಯ ಸುತ್ತಿನಲ್ಲಿ ಆದಿತ್ಯ ರಂಜನ್ ಜೊತೆ ಹೋರಾಡಿ ಡ್ರಾ ಮಾಡಿಕೊಂಡರು. ದಕ್ಷಿಣ ಕನ್ನಡದ ಆರಾಧ್ಯೊ ಭಟಾಚಾರ್ಯ ವಿರುದ್ಧ 4ನೇ ಸುತ್ತಿನಲ್ಲೂ ಅನ್ಶುಲ್ ಪಣಿಕ್ಕರ್ ವಿರುದ್ಧ 5ನೇ ಸುತ್ತಿನಲ್ಲೂ ಆದಿತ್ಯ ರಂಜನ್ ಗೆದ್ದಿದ್ದರು.
ಮೊದಲ ದಿನ ಮಾಯಾ ಅಮೀನ್ ಮತ್ತು ಧನುಷ್ಕಾ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದ ಆರುಷಿ ಡಿಸಿಲ್ವಾ ಟೂರ್ನಿಯ ಮಧ್ಯಭಾಗದ ಸುತ್ತುಗಳಲ್ಲಿ ಅಮೋಘ ಆಟದ ಮೂಲಕ ಗಮನ ಸೆಳೆದು ಎರಡನೇ ದಿನ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು. ಅಗ್ರ ಶ್ರೇಯಾಂಕಿತೆ ಬೆಂಗಳೂರಿನ ಪ್ರತೀತಿ ಬರ್ಡೋಲಿ ಅವರನ್ನು 5ನೇ ಸುತ್ತಿನಲ್ಲಿ ಮಣಿಸಿದ ಆರುಷಿ ಉತ್ತರ ಕನ್ನಡದ ಅಕ್ಷಯ ಸಾಥಿ ವಿರುದ್ಧ 6ನೇ ಸುತ್ತಿನಲ್ಲಿ ಜಯ ಸಾಧಿಸಿ ಇತರ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.