ADVERTISEMENT

ಉದ್ದೀಪನ ಮದ್ದು ಸೇವನೆ: ಎಎಫ್‌ಐ ಎಚ್ಚರಿಕೆ

ಪಿಟಿಐ
Published 31 ಅಕ್ಟೋಬರ್ 2020, 13:17 IST
Last Updated 31 ಅಕ್ಟೋಬರ್ 2020, 13:17 IST
ಆದಿಲ್‌ ಸುಮರಿವಾಲಾ
ಆದಿಲ್‌ ಸುಮರಿವಾಲಾ   

ಗುರುಗ್ರಾಮ: ಕೋವಿಡ್‌–19 ಪಿಡುಗಿನಿಂದ ಉಂಟಾಗಿರುವ ಬಿಡುವಿನ ಲಾಭ ಪಡೆದು ನಿಷೇಧಿತ ಮದ್ದು ಸೇವನೆಯಂತಹ ಕಾರ್ಯಗಳಿಗೆ ಕೈ ಹಾಕದಿರಿ ಎಂದುಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌(ಎಎಫ್‌ಐ), ಶನಿವಾರ ಎಚ್ಚರಿಕೆ ನೀಡಿದೆ. ಡೋಪಿಂಗ್‌ ಅಡೆತಡೆಯಿಲ್ಲದೆ ಮುಂದುವರಿದರೆ ಇಡೀ ದೇಶವೇ ನಿಷೇಧಕ್ಕೆ ಒಳಗಾಗಬಹುದು ಎಂದು ಫೆಡರೇಷನ್‌ ಆತಂಕ ವ್ಯಕ್ತಪಡಿಸಿದೆ.

‘ರಾಷ್ಟ್ರೀಯ ಶಿಬಿರದಿಂದ ಹೊರಗಿರುವ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸುವ ಸಾಧ್ಯತೆ ಹೆಚ್ಚಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೋಚ್‌ಗಳೂ ಇದರಲ್ಲಿ ಭಾಗಿಯಾಬಹುದು‘ ಎಂಬುದು ಎಎಫ್‌ಐ ಅಧ್ಯಕ್ಷ ಆದಿಲ್ ಸುಮರಿವಾಲಾ ಅವರ ಅಭಿಪ್ರಾಯ.

ಶನಿವಾರ ಇಲ್ಲಿ ನಡೆದ ಎಎಫ್‌ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಕೋವಿಡ್‌ ಹಾವಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಈಗ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಇಂಥ ಸಮಯದಲ್ಲಿ ಅಥ್ಲೀಟ್‌ ಹಾಗೂ ಕೋಚ್‌ಗಳು ತಪ್ಪು ದಾರಿ ತುಳಿಯುವ ಸಾಧ್ಯತೆ ಇದೆ. ಅಥ್ಲೀಟ್‌ಗಳು ತೆಗೆದುಕೊಳ್ಳಬಹುದಾದ ನಿಷೇಧಿತ ದ್ರವ್ಯಗಳ ಅಂಶ ಒಂದು ವರ್ಷದ ಕಾಲ ಶರೀರದೊಳಗೆ ಉಳಿಯಬಲ್ಲುದು. ಯಾವುದೇ ಸಂದರ್ಭದಲ್ಲಿ ಅವರು ಸಿಕ್ಕಿಬೀಳಬಹುದು. ಭಾರತ ಸದ್ಯ ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಹೀಗೆ ಮುಂದುವರಿದರೆ ನಮ್ಮ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೂ ಒಳಗಾಗಬಹುದು‘ ಎಂದು ಸುಮರಿವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.