ADVERTISEMENT

ನಿಯಮ ಉಲ್ಲಂಘಿಸುವ ಅಥ್ಲೀಟ್‌ಗಳ ವಿರುದ್ಧ ಶಿಸ್ತುಕ್ರಮ: ಭಾರತ ಅಥ್ಲೆಟಿಕ್ ಫೆಡರೇಷನ್

ಪಿಟಿಐ
Published 10 ಮೇ 2025, 15:39 IST
Last Updated 10 ಮೇ 2025, 15:39 IST
   

ನವದೆಹಲಿ: ಭಾರತ ಅಥ್ಲೆಟಿಕ್ ಫೆಡರೇಷನ್‌ ಅನುಮತಿಯಿಲ್ಲದೇ ವಿದೇಶದಲ್ಲಿ ತರಬೇತಿ ಮತ್ತು ಕೂಟಗಳಲ್ಲಿ ಸ್ಪರ್ಧಿಸುವ ಅಥ್ಲೀಟ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.    

‘ಲಿಖಿತ ಅನುಮತಿ ಪಡೆಯದೇ ಸ್ಪರ್ಧಿಸುವ ಅಥ್ಲೀಟ್‌ಗಳ ಪ್ರದರ್ಶನವನ್ನು ದಾಖಲೆ ಪುಸ್ತಕದಲ್ಲಿ ನಮೂದಿಸುವುದಿಲ್ಲ.  ಮುಂದಿನ ತಿಂಗಳಿನಿಂದ ಈ ಕ್ರಮ ಜಾರಿಗೆ ಬರಲಿದೆ’ ಎಂದು ಎಎಫ್‌ಐ ಅಧ್ಯಕ್ಷ ಬಹದ್ದೂರ್‌ ಸಿಂಗ್‌ ಸಗೂ ಎಚ್ಚರಿಸಿದ್ದಾರೆ. 

‘ಪೂರ್ವಾನುಮತಿ ಪಡೆಯದೇ ಅಥ್ಲೀಟ್‌ಗಳು ವಿದೇಶಗಳಿಗೆ ತೆರಳುವುದರಿಂದ ರಾಷ್ಟ್ರೀಯ ತಂಡಗಳ ಯೋಜನೆ ಅಸ್ತವ್ಯಸ್ತಗೊಳ್ಳಲಿದೆ. ಅಲ್ಲದೇ ಒಲಿಂಪಿಕ್ಸ್ ಮತ್ತು ಏಷ್ಯನ್‌ ಗೇಮ್ಸ್‌ಗಳಿಗಾಗಿ ಸಿದ್ಧತೆ ನಡೆಸಲು ಕೂಡ ಧಕ್ಕೆಯಾಗಲಿದೆ’ ಎಂದು ಎಎಫ್‌ಐ ಅಧ್ಯಕ್ಷರು ವಿವರಿಸಿದ್ದಾರೆ.

ADVERTISEMENT

ವಿದೇಶಗಳಿಗೆ ಇಲ್ಲಿಯ ಅಥ್ಲೀಟ್‌ಗಳು ತೆರಳುವ ಕುರಿತು ಹಾಗೂ ಉದ್ದೇಶಗಳು  ಫೆಡರೇಷನ್‌ಗೆ ಸ್ಪಷ್ಟ ಮಾಹಿತಿ ಇರಬೇಕು. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಕೆಲವು ಅಥ್ಲೀಟ್‌ಗಳು ಲಿಖಿತ ಅನುಮತಿ ಪಡೆಯದೇ ವಿದೇಶಕ್ಕೆ ತೆರೆಳಿದ್ದಾಗ ಫೆಡರೇಷನ್‌ ಅಸಮಾಧಾನಗೊಂಡಿತ್ತು. 

ಹೊಸ ನಿಯಮ ಜಾರಿಯಾದ ನಂತರ, ವಿದೇಶಕ್ಕೆ ಹೋಗುವ ಅಥ್ಲೀಟ್‌ಗಳು 30 ದಿನಗಳ ಮುಂಚಿತವಾಗಿ ಲಿಖಿತ ಮಾಹಿತಿ ನೀಡಬೇಕು. ಅದಾಗಿ ಒಂದು ವಾರದಲ್ಲಿ ಮನವಿ ಪುರಸ್ಕೃತ ಅಥವಾ ತಿರಸ್ಕೃತವೇ ಎಂಬುದರ ಮಾಹಿತಿ ರವಾನಿಸಲಾಗುತ್ತದೆ. ಲಿಖಿತ ಉತ್ತರವನ್ನೇ ನೀಡಲಾಗುತ್ತದೆ’ ಎಂದು ಎಎಫ್‌ಐ ಅಧ್ಯಕ್ಷ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.