ADVERTISEMENT

ಭಾರತ ಬಾಕ್ಸಿಂಗ್ ಫೆಡರೇಷನ್‌ ಅಧ್ಯಕ್ಷರಾಗಿ ಅಜಯ್ ಸಿಂಗ್ ಮರು ಆಯ್ಕೆ

ಪಿಟಿಐ
Published 3 ಫೆಬ್ರುವರಿ 2021, 14:54 IST
Last Updated 3 ಫೆಬ್ರುವರಿ 2021, 14:54 IST
ಅಜಯ್‌ ಸಿಂಗ್‌ (ಬಲ)– ಪಿಟಿಐ ಸಂಗ್ರಹ ಚಿತ್ರ
ಅಜಯ್‌ ಸಿಂಗ್‌ (ಬಲ)– ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಅಧ್ಯಕ್ಷರಾಗಿ ಅಜಯ್ ಸಿಂಗ್ ಮರು ಆಯ್ಕೆಯಾಗಿದ್ದಾರೆ. ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ (ಎಐಬಿಎ) ವೀಕ್ಷಕರ ಸಮ್ಮುಖದಲ್ಲಿ ಬುಧವಾರ ಇಲ್ಲಿ ನಡೆದ ಚುನಾವಣೆಯಲ್ಲಿ ಅವರು ಆಶೀಶ್ ಶೇಲಾರ್ ಅವರನ್ನು ಸೋಲಿಸಿದರು.

ಸ್ಪೈಸ್‌ಜೆಟ್‌ ವಿಮಾನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಅಜಯ್ ಸಿಂಗ್‌, 37–27 ಮತಗಳಿಂದ ಆಶೀಶ್ ಅವರನ್ನು ಹಿಂದಿಕ್ಕಿದರು. ಅಸ್ಸಾಂನ ಹೇಮಂತ್ ಕುಮಾರ್ ಕಲಿಟ ಅವರು ಪ್ರಧಾನ ಕಾರ್ಯದರ್ಶಿ ಆಗಿ ಚುನಾಯಿತರಾದರು. ಫೆಡರೇಷನ್‌ನ ವಾರ್ಷಿಕ ಸಾಮಾನ್ಯ ಸಭೆಯೂ ಈ ಸಂದರ್ಭದಲ್ಲಿ ನಡೆಯಿತು.

‘ಮತಗಳ ಅಂತರದ ಬಗ್ಗೆ ಪ್ರತಿಕ್ರಯಿಸುವುದಿಲ್ಲ. ಬಿಎಫ್‌ಐ ನನ್ನ ಮೇಲೆ ವಿಶ್ವಾಸ ಇರಿಸಿದ್ದು ಸಂತಸದ ಸಂಗತಿ. ಬಾಕ್ಸಿಂಗ್ ಕ್ರೀಡೆಯ ಪ್ರಗತಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು‘ ಎಂದು ಚುನಾವಣೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ಹೇಳಿದರು.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೇಲಾರ್ ಅವರು ಮಹಾರಾಷ್ಟ್ರದ ಬಿಜೆಪಿ ಶಾಸಕರಾಗಿದ್ದು, ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಬಿಎಫ್‌ಐ ಚುನಾವಣೆಯು ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಲಾಗಿತ್ತು. ಮುಂದೂಡಿಕೆಗೆ ಆಕ್ಷೇಪಿಸಿ ಉತ್ತರ ಪ್ರದೇಶದ ಬಾಕ್ಸಿಂಗ್ ಸಂಸ್ಥೆಯಿಂದ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಫೆಬ್ರುವರಿ 3ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು.

ಏಪ್ರಿಲ್–ಮೇಯಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಮುಂದೂಡಲಾಗಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಅನ್ನು ಏಪ್ರಿಲ್–ಮೇ ತಿಂಗಳಿನಲ್ಲಿ ಆಯೋಜಿಸಲಾಗುವುದು ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಇದೇ ವೇಳೆ ತಿಳಿಸಿದರು. ಈ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.