ADVERTISEMENT

ಜಿ.ಆಕಾಶ್‌ಗೆ ಗ್ರ್ಯಾಂಡ್‌ ಮಾಸ್ಟರ್‌ ಗರಿ

ಪಿಟಿಐ
Published 6 ಜುಲೈ 2020, 0:57 IST
Last Updated 6 ಜುಲೈ 2020, 0:57 IST
ಜಿ.ಆಕಾಶ್‌ –ಟ್ವಿಟರ್‌ ಚಿತ್ರ
ಜಿ.ಆಕಾಶ್‌ –ಟ್ವಿಟರ್‌ ಚಿತ್ರ   

ಚೆನ್ನೈ: ಪ್ರತಿಭಾನ್ವಿತ ಚೆಸ್‌ ಆಟಗಾರ ಜಿ.ಆಕಾಶ್‌ ಅವರಿಗೆ ಗ್ರ್ಯಾಂಡ್‌ ಮಾಸ್ಟರ್‌ ಗರಿ ಒಲಿದಿದೆ. ಅವರು ಈ ಸಾಧನೆ ಮಾಡಿದ ಭಾರತದ 66ನೇ ಚೆಸ್‌ಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ನ ಎರಡನೇ ಕೌನ್ಸಿಲ್‌ ಸಭೆಯಲ್ಲಿ ತಮಿಳುನಾಡಿನ ಆಕಾಶ್‌ ಅವರಿಗೆ ಗ್ರ್ಯಾಂಡ್‌ ಮಾಸ್ಟರ್‌ ಗೌರವ ನೀಡಲು ನಿರ್ಧರಿಸಲಾಗಿತ್ತು.

ತಮಿಳುನಾಡಿನವರೇ ಆದ ಎಂ.ಪ್ರಾಣೇಶ್‌ ಮತ್ತು ಗೋವಾದ ಅಮೇಯ್‌ ಔಡಿ ಅವರು ಇಂಟರ್‌ನ್ಯಾಷನಲ್‌ ಮಾಸ್ಟರ್‌ ಗೌರವ ಪಡೆದಿದ್ದಾರೆ. ಚೆನ್ನೈನ ಆಕಾಶ್‌ ಅವರು 2,495 ಫಿಡೆ ರೇಟಿಂಗ್‌ ಹೊಂದಿದ್ದಾರೆ. ‘ಭಾರತದ ಗ್ರ್ಯಾಂಡ್‌ ಮಾಸ್ಟರ್‌ಗಳ ಪಟ್ಟಿಯಲ್ಲಿ ಈಗ ನನ್ನ ಹೆಸರೂ ಸೇರ್ಪಡೆಯಾಗಿದೆ. ಇದು ಬಹುದೊಡ್ಡ ಗೌರವ. ನನ್ನ ಪಾಲಿಗಿದು ಅವಿಸ್ಮರಣೀಯ ಕ್ಷಣ. ಈಗ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಆದಷ್ಟು ಬೇಗ ರೇಟಿಂಗ್‌ ಅನ್ನು 2600ಕ್ಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಆಕಾಶ್‌ ಹೇಳಿದ್ದಾರೆ.

ADVERTISEMENT

2012ರಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಆಕಾಶ್‌, ಎಂಜಿನಿಯರಿಂಗ್‌ ಪೂರ್ಣಗೊಳಿಸುವ ಉದ್ದೇಶದಿಂದ ನಾಲ್ಕು ವರ್ಷಗಳ ಕಾಲ ಚೆಸ್‌ನಿಂದ ದೂರ ಉಳಿದಿದ್ದರು. 2018ರಲ್ಲಿ ಮತ್ತೆ ಸ್ಪರ್ಧಾತ್ಮಕ ಚೆಸ್‌ಗೆ ಮರಳಿದ್ದರು.

ಆಕಾಶ್‌ ಅವರು ಕಳೆದ ವರ್ಷ ಸಿಕ್ಕಿಂ ರಾಜ್ಯದಲ್ಲಿ ನಡೆದಿದ್ದ ರಾಷ್ಟ್ರೀಯ ‘ಎ’ ಚಾಂಪಿಯನ್‌ಷಿಪ್‌ ಹಾಗೂ ಈ ವರ್ಷದ ಆರಂಭದಲ್ಲಿ ಪ್ರಾಗ್‌ನಲ್ಲಿ ನಡೆದಿದ್ದ ಚೆಸ್‌ ಟೂರ್ನಿಯಲ್ಲಿ ಶ್ರೇಷ್ಠ ಆಟ ಆಡಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಗ್ರ್ಯಾಂಡ್‌ ಮಾಸ್ಟರ್‌ ನಾರ್ಮ್‌ಗಳನ್ನು ಗಿಟ್ಟಿಸಿಕೊಂಡಿದ್ದರು. ಪ್ರಾಣೇಶ್‌ ಅವರು ಕಳೆದ ವರ್ಷ ನಡೆದಿದ್ದ ಚೆನ್ನೈ ಓಪನ್‌ ಹಾಗೂ ಈ ವರ್ಷದ ಆರಂಭದಲ್ಲಿ ನಡೆದಿದ್ದ ದೆಹಲಿ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.