ADVERTISEMENT

ಲಾಂಗ್‌ಜಂಪ್‌: ಫೈನಲ್‌ಗೆ ಅರ್ಹತೆ ಪಡೆದ ಜೆಸ್ವಿನ್‌

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಶ್ರೀಶಂಕರ್‌ಗೆ ನಿರಾಸೆ

ಪಿಟಿಐ
Published 23 ಆಗಸ್ಟ್ 2023, 21:23 IST
Last Updated 23 ಆಗಸ್ಟ್ 2023, 21:23 IST
   

ಬುಡಾಪೆಸ್ಟ್‌: ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್‌ ಆಲ್ಡ್ರಿನ್‌ ಅವರು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದರು. ಆದರೆ ಮುರಳಿ ಶ್ರೀಶಂಕರ್ ಅವರು ಬುಧವಾರ ಕಳಪೆ ಪ್ರದರ್ಶನದೊಡನೆ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ್ದು ಆಘಾತ ಮೂಡಿಸಿತು.

ಆಲ್ಡ್ರಿನ್‌ ಮೊದಲ ಯತ್ನದಲ್ಲೇ ಎಂಟು ಮೀಟರ್ ಜಿಗಿದು ಫೈನಲ್‌ಗೆ ಅರ್ಹತೆ ಪಡೆದರು. ಅವರ ಮುಂದಿನ ಎರಡು ಯತ್ನಗಳು ಫೌಲ್‌ನಲ್ಲಿ ಕೊನೆಗೊಂಡವು.

ಅವರು ಮಾರ್ಚ್‌ನಲ್ಲಿ 8.42 ಮೀ. ಜಿಗಿದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ ಅವರು ಆರನೇ ಸ್ಥಾನ ಪಡೆದು ಒಟ್ಟಾರೆ 12ನೇ ಹಾಗೂ ಅಂತಿಮ ಸ್ಪರ್ಧಿಯಾಗಿ ಫೈನಲ್‌ಗೆ ಅವಕಾಶ ಪಡೆದರು.

ADVERTISEMENT

ಶ್ರೀಶಂಕರ್‌ ಕ್ರಮವಾಗಿ 7.74 ಮೀ, 7.66 ಮೀ, 6.70 ಮೀ. ದೂರ ಜಿಗಿದು ಗ್ರೂಪ್‌ ‘ಎ’ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನ ಹಾಗೂ ಒಟ್ಟಾರೆ 22ನೇ ಸ್ಥಾನ ಪಡೆದರು. ಈ ಋತುವಿನಲ್ಲಿ ಅವರು 4–5 ಬಾರಿ ಎಂಟು ಮೀ. ದಾಟಿದ್ದರು. ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ ಸಾಬ್ಳೆ ಕೂಡ ನಿರಾಸೆ ಮೂಡಿಸಿದ್ದರು. ಮಂಗಳವಾರ ರಾತ್ರಿ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್‍ರಾಜಿ ಅವರೂ ಸೆಮಿಫೈನಲ್‌ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.