
ನವದೆಹಲಿ: ಭಾರತದ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ಸ್‌ನ ಮೊದಲ ಸುತ್ತಿನಲ್ಲಿ 23–21, 19–21, 21–17ರಿಂದ ವಿಶ್ವದ ಅಗ್ರಮಾನ್ಯ ಆಟಗಾರ ಚೀನಾದ ಶಿ ಯು ಕಿ ಅವರಿಗೆ ಆಘಾತ ನೀಡಿದರು. ಆ ಮೂಲಕ ಮಂಗಳವಾರ ಇಲ್ಲಿ ಆರಂಭವಾದ ಪ್ರತಿಷ್ಠಿತ ಟೂರ್ನಿಯಲ್ಲಿ ಭರ್ಜರಿಯಾಗಿ ಅಭಿಯಾನ ಆರಂಭಿಸಿದರು.
ಉತ್ತರಾಖಂಡದ ಅಲ್ಮೋರಾದ 24 ವರ್ಷ ವಯಸ್ಸಿನ ಆಟಗಾರ, ನಿಕಟ ಪೈಪೋಟಿಯಿಂದ ಕೂಡಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಛಲದಿಂದ ಆಡಿದರು. ಪಂದ್ಯದುದ್ದಕ್ಕೂ ಶಾಂತಚಿತ್ತ ಹಾಗೂ ಸಂಯಮದಿಂದ ಆಡಿದ ಅವರು, ಎದುರಾಳಿ ಆಟಗಾರ ಪಾಯಿಂಟ್ಸ್‌ಗಾಗಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದರು. ಅಗತ್ಯವಿದ್ದಾಗ ಆಕ್ರಮಣಕಾರಿ ಆಟವನ್ನೂ ಪ್ರದರ್ಶಿಸಿದರು. ಪಂದ್ಯವು 1 ಗಂಟೆ 18 ನಿಮಿಷಗಳವರೆಗೆ ಸಾಗಿತು.
ಭಾರತದ ಆಟಗಾರ ಮೊದಲ ಗೇಮ್ ಗೆಲ್ಲಲು ಬೆವರು ಹರಿಸಬೇಕಾಯಿತು. ಒಂದು ಹಂತದಲ್ಲಿ 11–7ರ ಮುನ್ನಡೆ ಸಾಧಿಸಿದ್ದರೂ, ಚೀನಾದ ಆಟಗಾರ ಚೇತರಿಸಿಕೊಂಡು 20–20ರಿಂದ ಸಮಬಲ ಸಾಧಿಸಿದರು. ಆಗ ಕ್ರಾಸ್‌ಕೋರ್ಟ್ ಹೊಡೆತದೊಂದಿಗೆ 23–21ರಿಂದ ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್ ವೇಳೆಗೆ ಲಕ್ಷ್ಯ ತುಸು ಆಯಾಸಗೊಂಡರು. ಯು ಕಿ 21–19ರಿಂದ ಗೇಮ್ ತಮ್ಮದಾಗಿಸಿಕೊಂಡು, 1–1ರ ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಪುಟಿದೆದ್ದ ಲಕ್ಷ್ಯ, ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದರು. ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಎದುರಾಳಿ ಆಟಗಾರ ದಣಿಯುವಂತೆ ಮಾಡಿದರು. 21–17ರಲ್ಲಿ ಹಾಲಿ ಚಾಂಪಿಯನ್ ಆಟಗಾರನ ವಿರುದ್ಧ ಮೇಲುಗೈ ಸಾಧಿಸಿದರು.
ಭಾರತದ ಆಟಗಾರ 2023ರ ಏಷ್ಯನ್ ಗೇಮ್ಸ್ ಟೀಮ್ ಚಾಂಪಿಯನ್‌ಷಿಪ್ಸ್‌ನಲ್ಲಿಯೂ ಚೀನಾದ ಆಟಗಾರನಿಗೆ ಆಘಾತ ನೀಡಿದ್ದರು.
ಆದರೆ, ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್ ಅವರು 11–21, 6–21ರಲ್ಲಿ ಚೀನಾದ ಷೆನ್ ಯು ಫೀಯಿ ಅವರಿಗೆ ಸುಲಭವಾಗಿ ಮಣಿದರು.
ಮಿಶ್ರ ಡಬಲ್ಸ್‌ನಲ್ಲಿ ಭಾರತದ ಧ್ರುವ್ ಕಪಿಲಾ– ತನಿಷಾ ಕ್ರ್ಯಾಸ್ಟೊ ಜೋಡಿ 21–17, 21–19ರಿಂದ ಮಲೇಷ್ಯಾದ ಹೋ ಪಾಂಗ್ ರೊನ್ ಹಾಗೂ ಷೆಂಗ್ ಸು ಯಿನ್ ಅವರನ್ನು ಸೋಲಿಸಿ, ಎರಡನೇ ಸುತ್ತಿಗೆ ಮುನ್ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.