ADVERTISEMENT

44ನೇ ಚೆಸ್‌ ಒಲಿಂಪಿಯಾಡ್‌ಗೆ ಚಾಲನೆ ಇಂದು; ಭಾರತಕ್ಕೆ ಪದಕದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 3:01 IST
Last Updated 28 ಜುಲೈ 2022, 3:01 IST
ಚೆಸ್‌ ಒಲಿಂಪಿಯಾಡ್‌ನ ಸ್ಪರ್ಧೆಗಳು ನಡೆಯಲಿರುವ ತಾಣದಲ್ಲಿ ಬುಧವಾರ ಅಂತಿಮ ಸಿದ್ಧತೆ ನಡೆಸಿದ ಸಿಬ್ಬಂದಿ –ಎಎಫ್‌ಪಿ ಚಿತ್ರ
ಚೆಸ್‌ ಒಲಿಂಪಿಯಾಡ್‌ನ ಸ್ಪರ್ಧೆಗಳು ನಡೆಯಲಿರುವ ತಾಣದಲ್ಲಿ ಬುಧವಾರ ಅಂತಿಮ ಸಿದ್ಧತೆ ನಡೆಸಿದ ಸಿಬ್ಬಂದಿ –ಎಎಫ್‌ಪಿ ಚಿತ್ರ   

ಮಾಮಾಲ್ಲಪುರಂ (ಪಿಟಿಐ): ಜಗತ್ತಿನ ಶ್ರೇಷ್ಠ ಚೆಸ್‌ ಸ್ಪರ್ಧಿಗಳ ಬುದ್ದಿಮತ್ತೆಯನ್ನು ತೆರೆದಿಡಲಿರುವ ಚೆಸ್ ಒಲಿಂಪಿಯಾಡ್‌ಗೆ ಗುರುವಾರ ಚಾಲನೆ ದೊರೆಯಲಿದ್ದು, ಚದುರಂಗದಾಟದ ಅಭಿಮಾನಿಗಳ ಚಿತ್ತ ಚೆನ್ನೈ ಸಮೀಪದ ಐತಿಹಾಸಿಕ ನಗರ ಮಾಮಾಲ್ಲಪುರಂನತ್ತ (ಮಹಾಬಲಿಪುರಂ) ನೆಟ್ಟಿದೆ.

ವಿವಿಧ ದೇಶಗಳ ಒಂದೂವರೆ ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಈಗಾಗಲೇ ಒಲಿಂಪಿಯಾಡ್‌ನ ತಾಣದಲ್ಲಿ ವಾಸ್ತವ್ಯ ಹೂಡಿದ್ದು, ಇಡೀ ನಗರದಲ್ಲಿ ಚೆಸ್‌ ಕಾವು ಗರಿಗೆದರಿದೆ.ಭಾರತದ ಆತಿಥ್ಯದಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿರುವ ಟೂರ್ನಿಯನ್ನು ಯಶಸ್ವಿಯಾಗಿಸಲು ಸಂಘಟಕರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಯಾಡ್‌ಗೆ ಗುರುವಾರ ಚಾಲನೆ ನೀಡಲಿದ್ದು, ಶುಕ್ರವಾರದಿಂದ ಸ್ಪರ್ಧೆಗಳು ನಡೆಯಲಿವೆ. ಆ.9 ರಂದು ಟೂರ್ನಿಗೆ ತೆರೆ ಬೀಳಲಿದೆ. ಮುಕ್ತ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಮೂರು ತಂಡಗಳನ್ನು ಕಣಕ್ಕಿಳಿಸಿರುವ ಭಾರತ, ಪದಕ ಗೆಲ್ಲುವ ವಿಶ್ವಾಸದಲ್ಲಿದೆ.

ADVERTISEMENT

ಚೆಸ್‌ನ ‘ಶಕ್ತಿಕೇಂದ್ರ’ ಎನಿಸಿಕೊಂಡಿರುವ ರಷ್ಯಾ ಮತ್ತು ಚೀನಾ ಈ ಬಾರಿ ಸ್ಪರ್ಧಿಸದೇ ಇರುವುದರಿಂದ ಭಾರತ ಸೇರಿದಂತೆ ಇತರ ದೇಶಗಳಿಗೆ ಪದಕ ಗೆಲ್ಲುವ ಮುಕ್ತ ಅವಕಾಶ ದೊರೆತಿದೆ.

ಐದು ಬಾರಿಯ ವಿಶ್ವಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಆಡದಿರಲು ನಿರ್ಧರಿಸಿದ್ದು, ಮಾರ್ಗದರ್ಶಕರಾಗಿ ಭಾರತದ ತಂಡಗಳಿಗೆ ಸಲಹೆ ನೀಡಲಿದ್ದಾರೆ. ಅವರ ಅನುಪಸ್ಥಿತಿಯ ನಡುವೆಯೂ ಆತಿಥೇಯ ತಂಡ ಪದಕ ಗೆಲ್ಲುವ ವಿಶ್ವಾಸ ಹೊಂದಿದೆ.

ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡ ಅಮೆರಿಕದ ಬಳಿಕ ಎರಡನೇ ಶ್ರೇಯಾಂಕ ಪಡೆದುಕೊಂಡಿದ್ದು, ಚಿನ್ನದ ಪದಕದತ್ತ ದೃಷ್ಟಿ ನೆಟ್ಟಿದೆ. ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನೊಳಗೊಂಡ ನಾರ್ವೆ ಮತ್ತು ಅಜರ್‌ಬೈಜಾನ್‌ ತಂಡಗಳೂ ಚಿನ್ನದ ಪದಕದ ಮೇಲೆ ಚಿತ್ತ ಹರಿಸಿವೆ.

ಫ್ಯಾಬಿಯೊ ಕರುವಾನ, ವೆಸ್ಲಿ ಸೊ, ಲೆವೊನ್‌ ಅರೋನಿಯನ್, ಸ್ಯಾಮ್‌ ಶೇಂಕ್‌ಲೆಂಡ್‌ ಮತ್ತು ಲೈನಿಯರ್‌ ಡೊಮಿಂಗ್ವೆಸ್ ಅವರನ್ನು ಒಳಗೊಂಡ ಅಮೆರಿಕ ತಂಡ ಸರಾಸರಿ 2,771 ಎಲೊ ರೇಟಿಂಗ್ಸ್‌ ಹೊಂದಿದೆ.

ಅನುಭವಿ ಸ್ಪರ್ಧಿಗಳಾದ ಪಿ.ಹರಿಕೃಷ್ಣ, ಕೆ.ಶಶಿಕಿರಣ್‌ ಅವರು ಇರುವ ಭಾರತ ‘ಎ’ ತಂಡದ ಸರಾಸರಿ ಎಲೊ ರೇಟಿಂಗ್ಸ್ 2,696 ಆಗಿದೆ. ಸರಾಸರಿ ರೇಟಿಂಗ್ಸ್ ಪ್ರಕಾರ, ಅಮೆರಿಕವೇ ಚಿನ್ನ ಗೆಲ್ಲುವ ಫೇವರಿಟ್‌. ಆದರೆ ಆಟಗಾರರ ವೈಯಕ್ತಿಕ ಪ್ರದರ್ಶನಕ್ಕಿಂತಲೂ ತಂಡದ ಒಟ್ಟಾರೆ ಪ್ರದರ್ಶನ ಇಲ್ಲಿ ಮುಖ್ಯ ಎನಿಸುತ್ತದೆ.

ಭಾರತದ ’ಬಿ‘ ಮತ್ತು ’ಸಿ‘ ತಂಡಗಳಿಂದಲೂ ಉತ್ತಮ ಸಾಧನೆ ನಿರೀಕ್ಷಿಸಲಾಗಿದೆ. ಎಳೆಯ ಆಟಗಾರರನ್ನು ಒಳಗೊಂಡಿರುವ ಭಾರತ ‘ಬಿ’ ಮತ್ತು ‘ಸಿ’ ತಂಡಗಳು ಕ್ರಮವಾಗಿ 11 ಹಾಗೂ 17ನೇ ಶ್ರೇಯಾಂಕ ಪಡೆದುಕೊಂಡಿವೆ.

ಕೋಚ್‌ ಆರ್‌.ಬಿ.ರಮೇಶ್‌ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ‘ಬಿ’ ತಂಡ ‘ಡಾರ್ಕ್‌ ಹಾರ್ಸ್‌’ ಎಂಬ ಹಣೆಪಟ್ಟಿ ಹಚ್ಚಿಕೊಂಡಿದೆ. ನಿಹಾಲ್‌ ಸರೀನ್‌, ಡಿ.ಗುಕೇಶ್‌ ಮತ್ತು ಆರ್‌.ಪ್ರಗ್ನಾನಂದ ಅವರು ತಂಡದ ಶಕ್ತಿ ಎನಿಸಿರುವರು.

ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡಕ್ಕೆ ಅಗ್ರಶ್ರೇಯಾಂಕ ನೀಡಲಾಗಿದೆ.

ಭಾರತದ 6 ತಂಡ, 30 ಸ್ಪರ್ಧಿಗಳು

ಮುಕ್ತ ವಿಭಾಗದಲ್ಲಿ ಮೂರು ಮತ್ತು ಮಹಿಳೆಯರ ವಿಭಾಗದಲ್ಲಿ ಮೂರು ಸೇರಿದಂತೆ ಭಾರತದ ಒಟ್ಟು ಆರು ತಂಡಗಳು ಈ ಬಾರಿ ಕಣದಲ್ಲಿವೆ.

ಪ್ರತಿ ತಂಡದಲ್ಲಿ ಐವರು ಸ್ಪರ್ಧಿಗಳಿದ್ದು, ಒಟ್ಟು 30 ಮಂದಿಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. ಪ್ರತಿ ದೇಶವು ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಒಂದು ತಂಡವನ್ನು ಮಾತ್ರ ಕಣಕ್ಕಿಳಿಸಬಹುದು.

ಆತಿಥ್ಯ ವಹಿಸುವ ದೇಶಕ್ಕೆ ಪ್ರತಿ ವಿಭಾಗದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸುವ ಅವಕಾಶವಿದೆ. ಇದರಿಂದ ಭಾರತದ ನಾಲ್ಕು ತಂಡಗಳನ್ನು ಹೆಸರಿಸಲಾಗಿತ್ತು. ಆದರೆ ಮುಕ್ತ ವಿಭಾಗದಲ್ಲಿ 187 ಮತ್ತು ಮಹಿಳೆಯರ ವಿಭಾಗದಲ್ಲಿ 161 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.

ತಂಡಗಳು ಸಮಸಂಖ್ಯೆಯಲ್ಲಿರಬೇಕಾದ ಕಾರಣ ಆತಿಥೇಯ ಭಾರತಕ್ಕೆ ಪೇರಿಂಗ್ ನಿಯಮದ ಪ್ರಕಾರ ಎರಡೂ ವಿಭಾಗಗಳಲ್ಲಿ ಇನ್ನೊಂದು ತಂಡ ಕಣಕ್ಕಿಳಿಸುವ ಅವಕಾಶ ದೊರೆಯಿತು.

2014 ರಲ್ಲಿ ಭಾರತಕ್ಕೆ ಮೊದಲ ಪದಕ: ಈ ಪ್ರತಿಷ್ಠಿತ ಕೂಟದಲ್ಲಿ ಭಾರತಕ್ಕೆ ಹೆಚ್ಚಿನ ಯಶಸ್ಸು ದೊರೆತಿಲ್ಲ. 1956 ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಭಾರತ ಮೊದಲ ಬಾರಿ ಪಾಲ್ಗೊಂಡಿತ್ತು. ಆದರೆ ಮೊದಲ ಪದಕ ಗೆಲ್ಲಲು 2014ರ ವರೆಗೆ ಕಾಯಬೇಕಾಯಿತು. ನಾರ್ವೆಯ ಟ್ರಾಮ್ಸೊದಲ್ಲಿ ನಡೆದಿದ್ದ 41ನೇ ಒಲಿಂಪಿಯಾಡ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು.

2020 ರಲ್ಲಿ ಕೋವಿಡ್‌ ಕಾರಣ ವರ್ಚುವಲ್‌ ಆಗಿ ನಡೆದಿದ್ದ ಕೂಟದಲ್ಲಿ ಭಾರತ ಮತ್ತು ರಷ್ಯಾ ಜಂಟಿ ಚಾಂಪಿಯನ್ ಆಗಿದ್ದವು. 2021 ರಲ್ಲಿ (ವರ್ಚುವಲ್‌) ಭಾರತಕ್ಕೆ ಮೂರನೇ ಸ್ಥಾನ ಲಭಿಸಿತ್ತು.

ಭಾರತದ ತಂಡಗಳು

ಓಪನ್‌ ವಿಭಾಗ

ಭಾರತ ‘ಎ’: ವಿದಿತ್‌ ಗುಜರಾತಿ, ಪಿ.ಹರಿಕೃಷ್ಣ, ಅರ್ಜುನ್‌ ಎರಿಗೈಸಿ, ಎಸ್‌.ಎಲ್‌.ನಾರಾಯಣನ್‌, ಕೃಷ್ಣನ್‌ ಶಶಿಕಿರಣ್‌

ಭಾರತ ‘ಬಿ’ : ನಿಹಾಲ್‌ ಸರೀನ್‌, ಡಿ.ಗುಕೇಶ್‌, ಬಿ.ಅಧಿಬನ್‌, ಆರ್‌.ಪ್ರಗ್ನಾನಂದ, ರೌನಕ್‌ ಸಾಧ್ವಾನಿ

ಭಾರತ ‘ಸಿ’: ಸೂರ್ಯಶೇಖರ ಗಂಗೂಲಿ, ಕಾರ್ತಿಕೇಯನ್‌ ಮುರಳಿ, ಎಸ್‌.ಪಿ.ಸೇತುರಾಮನ್‌, ಅಭಿಜಿತ್‌ ಗುಪ್ತಾ, ಅಭಿಮನ್ಯು ಪುರಾಣಿಕ್‌

ಮಹಿಳೆಯರ ವಿಭಾಗ

ಭಾರತ ‘ಎ’: ಕೊನೇರು ಹಂಪಿ, ಹರಿಕ ದ್ರೋನವಳಿ, ಆರ್.ವೈಶಾಲಿ, ಭಕ್ತಿ ಕುಲಕರ್ಣಿ, ತಾನಿಯಾ ಸಚ್‌ದೇವ್‌

ಭಾರತ ‘ಬಿ’: ವಂತಿಕಾ ಅಗರವಾಲ್‌, ಸೌಮ್ಯಾ ಸ್ವಾಮಿನಾಥನ್‌, ಮೇರಿ ಆ್ಯನ್‌ ಗೋಮ್ಸ್‌, ಪದ್ಮಿನಿ ರಾವುತ್‌, ದಿವ್ಯಾ ದೇಶಮುಖ್

ಭಾರತ ‘ಸಿ’: ಇಶಾ ಕರ್ವಾಡೆ, ಸಾಹಿತಿ ವರ್ಷಿಣಿ, ಬಿ.ಪ್ರತ್ಯೂಷಾ, ಪಿ.ವಿ.ನಂದಿದಾ, ವಿಶ್ವಾ ವಾಸನವಾಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.