ADVERTISEMENT

ಏಷ್ಯನ್ ಕ್ರೀಡಾಕೂಟ ಬಾಕ್ಸಿಂಗ್: ಒಲಿಂಪಿಕ್ಸ್ ಚಾಂಪಿಯನ್ ಮಣಿಸಿ ಚಿನ್ನಗೆದ್ದ ಫಂಗಲ್

ಪುರುಷರ ಲೈಟ್‌ ಫ್ಲೈ 49 ಕೆಜಿ ವಿಭಾಗ

ಏಜೆನ್ಸೀಸ್
Published 1 ಸೆಪ್ಟೆಂಬರ್ 2018, 19:12 IST
Last Updated 1 ಸೆಪ್ಟೆಂಬರ್ 2018, 19:12 IST
ಫೈನಲ್ ಬೌಟ್‌ನಲ್ಲಿ ಭಾರತದ ಅಮಿತ್ ಫಂಗಲ್‌ ಎದುರಾಳಿಗೆ ‍ಪಂಚ್‌ ಮಾಡಲು ಮುಂದಾದ ಸಂದರ್ಭ –ಪಿಟಿಐ ಚಿತ್ರ
ಫೈನಲ್ ಬೌಟ್‌ನಲ್ಲಿ ಭಾರತದ ಅಮಿತ್ ಫಂಗಲ್‌ ಎದುರಾಳಿಗೆ ‍ಪಂಚ್‌ ಮಾಡಲು ಮುಂದಾದ ಸಂದರ್ಭ –ಪಿಟಿಐ ಚಿತ್ರ   

ಜಕಾರ್ತ: ಒಲಿಂಪಿಕ್ ಚಾಂಪಿಯನ್‌, ಉಜ್ಬೆಕಿಸ್ತಾನದ ದುಸ್ಮಟೊವ್‌ ಹಸನ್‌ಬೈ ವಿರುದ್ಧ ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಅಮಿತ್ ಫಂಗಲ್‌ ಅವರು ಬಾಕ್ಸಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿದರು.

ಶನಿವಾರ ಮಧ್ಯಾಹ್ನ ನಡೆದ ಪುರುಷರ ಲೈಟ್ ಫ್ಲೈ (49 ಕೆಜಿ) ವಿಭಾಗದ ಫೈನಲ್‌ ಬೌಟ್‌ನಲ್ಲಿ ಅಮಿತ್ 3–2ರಿಂದ ಜಯ ಸಾಧಿಸಿದರು. ಈ ಬಾರಿಯ ಕೂಟದ ಬಾಕ್ಸಿಂಗ್‌ನಲ್ಲಿ ಭಾರತ ಗೆದ್ದ ಏಕೈಕ ಚಿನ್ನ ಇದಾಗಿದೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ದುಸ್ಮಟೊವ್‌ ಕಳೆದ ಬಾರಿಯ ಏಷ್ಯನ್ ಕ್ರೀಡಾಕೂಟದ ಕ್ವಾರ್ಟರ್‌ ಫೈನಲ್‌ ಬೌಟ್‌ನಲ್ಲಿ ಅಮಿತ್ ಅವರನ್ನು ಮಣಿಸಿದ್ದರು. ಕಳೆದ ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ADVERTISEMENT

ಇಥ ಅಪಾಯಕಾರಿ ಬಾಕ್ಸರ್‌ನನ್ನು ಮಣಿಸಲು ಪ್ರಬುದ್ಧ ರಣನೀತಿಯೊಂದಿಗೆ ಕಣಕ್ಕೆ ಇಳಿದಿದ್ದ ಅಮಿತ್‌ ಆರಂಭದಿಂದಲೇ ನಾಜೂಕಿನ ಹೆಜ್ಜೆ ಇರಿಸಿದರು. ಎದುರಾಳಿ ಆಧಿಪತ್ಯ ಸ್ಥಾಪಿಸದಂತೆ ನೋಡಿಕೊಂಡ ಅವರು ಅವಕಾಶ ಸಿಕ್ಕಿದಾಗಲೆಲ್ಲ ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿದರು. ಆಕ್ರಮಣಕಾರಿ ಪಂಚ್‌ಗಳ ಜೊತೆಯಲ್ಲಿ ರಕ್ಷಣೆಗೂ ಒತ್ತು ನೀಡಿದ ಅವರಿಗೆ ಎದುರಾಳಿ ಭಾರಿ ಪೈಪೋಟಿ ನೀಡಿದರು. ಆದರೆ ಆ ಸವಾಲನ್ನು ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.