ADVERTISEMENT

ಅಥ್ಲೆಟಿಕ್ಸ್‌: ರಾಷ್ಟ್ರೀಯ ದಾಖಲೆ ಬರೆದ ಅಮ್ಲಾನ್

ಪಿಟಿಐ
Published 6 ಏಪ್ರಿಲ್ 2022, 19:00 IST
Last Updated 6 ಏಪ್ರಿಲ್ 2022, 19:00 IST
ಅವಿನಾಶ್ ಸಬ್ಳೆ –ಪಿಟಿಐ ಚಿತ್ರ
ಅವಿನಾಶ್ ಸಬ್ಳೆ –ಪಿಟಿಐ ಚಿತ್ರ   

ಕೋಯಿಕ್ಕೋಡ್‌: ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಅಸ್ಸಾಂನ ಅಮ್ಲಾನ್ ಬೋರ್ಗೊಹೇನ್ 200 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದರು.

ಇಲ್ಲಿ ಬುಧವಾರ ಮುಕ್ತಾಯೊಗೊಂಡ ಫೆಡರೇಷನ್ ಕಪ್ ಅಥ್ಲೆಟಿಕ್ ಕೂಟದಲ್ಲಿ ಅವರು 20.52 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಮುಹಮ್ಮದ್ ಅನಾಸ್ ಯಾಹಿಯಾ (20.63 ಸೆಕೆಂಡು) ಅವರ ದಾಖಲೆ ಮುರಿದರು. ಇದು ಅಮ್ಲಾನ್ ಅವರ ಚೊಚ್ಚಲ ಕೂಟವಾಗಿದೆ. ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾದರು.

ಪುರುಷರ 5000 ಮೀಟರ್ಸ್ ಓಟದಲ್ಲಿ 13:39.43 ಸಾಧನೆಯೊಂದಿಗೆ ಅವಿನಾಸ್ ಸಬ್ಳೆ ಕೂಟ ದಾಖಲೆ ನಿರ್ಮಿಸಿದರು. 1992ರಿಂದ ಈ ದಾಖಲೆ ಬಹದ್ದೂರ್ ಪ್ರಸಾದ್ ಹೆಸರಿನಲ್ಲಿತ್ತು. ಟ್ರಿಪಲ್ ಜಂಪ್‌ನಲ್ಲಿ ಕೇರಳದ ಎಲ್ದೋಸ್ ‍ಪೌಲ್ 16.99 ಮೀಟರ್‌ ಸಾಧನೆಯೊಂದಿಗೆ 10 ವರ್ಷಗಳ ಹಿಂದಿನ ಕೂಟ ದಾಖಲೆ ಮುರಿದರು. ತಮಿಳುನಾಡಿನ ಪ್ರವೀಣ್ ಚಿತ್ರವೇಲ್‌ ಮತ್ತು ಕೇರಳದ ಕಾರ್ತಿಕ ಉಣ್ಣಿಕೃಷ್ಣನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿ ಎಲ್ದೋಸ್ ಜೊತೆ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು.

ADVERTISEMENT

ಪ್ರಿಯಾ ಮೋಹನ್‌ ಉತ್ತಮ ಸಾಧನೆ

ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಅಸ್ಸಾಂನ ಹಿಮಾ ದಾಸ್ 23.63 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನಕ್ಕೆ ಮುತ್ತಿಕ್ಕಿದರು. ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಮಹಾರಾಷ್ಟ್ರದ ಕೈಲಾಶ್ ಮಿಶ್ರಾ ಅವರನ್ನು ಹಿಮಾ ಹಿಂದಿಕ್ಕಿದರು. ಕರ್ನಾಟಕದ ಪ್ರಿಯಾ ಮೋಹನ್ ಕಂಚಿನ ಪದಕ ಗೆದ್ದುಕೊಂಡರು. ಆದರೆ ಇಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಮೂಡಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.