ADVERTISEMENT

ಮೈಮನದ ಆರೋಗ್ಯಕ್ಕೆ ವಿಯೆಟ್ನಾಂನಲ್ಲಿ ಸಮರಕಲೆಯ ಮೊರೆ

ಏಜೆನ್ಸೀಸ್
Published 12 ಜೂನ್ 2020, 5:21 IST
Last Updated 12 ಜೂನ್ 2020, 5:21 IST
ಮಾಸ್ಟರ್ ಗಿಯೆನ್ ಕಾಚ್ ಫಾನ್ (ಮಧ್ಯದಲ್ಲಿರುವವರು) ಬಳಿ ಅಭ್ಯಾಸ ಮಾಡುತ್ತಿರುವ ಶಿಷ್ಯಂದಿರು –ಎಎಫ್‌ಪಿ ಚಿತ್ರ
ಮಾಸ್ಟರ್ ಗಿಯೆನ್ ಕಾಚ್ ಫಾನ್ (ಮಧ್ಯದಲ್ಲಿರುವವರು) ಬಳಿ ಅಭ್ಯಾಸ ಮಾಡುತ್ತಿರುವ ಶಿಷ್ಯಂದಿರು –ಎಎಫ್‌ಪಿ ಚಿತ್ರ   

ಹನೊಯ್: ಆಧುನಿಕತೆಯ ಗಾಳಿ ಸೋಕಿದ ಪರಿಣಾಮ ನವಸಮಾಜದತ್ತ ವೇಗವಾಗಿ ಹೆಜ್ಜೆ ಹಾಕಿರುವ ಕಮ್ಯುನಿಸ್ಟ್‌ ತಾಣ ವಿಯೆಟ್ನಾಂನಲ್ಲಿ ಈಗ ಪುರಾತನ ಸಮರಕಲೆಯ ಮೊರೆತ. ಪುರುಷ–ಮಹಿಳೆ–ಮಕ್ಕಳೆನ್ನದೆ ಎಲ್ಲ ವರ್ಗದವರೂ ಸಮರಕಲೆಯ ಅಭ್ಯಾಸದಲ್ಲಿ ತೊಡಗಿದ್ದು ವೈವಿಧ್ಯಮಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಗುರುವಾರ ಬಿಸಿಲಿನ ಝಳದ ನಡುವೆ ದೇವಾಲಯವೊಂದರ ಆವರಣದಲ್ಲಿ ಅಭ್ಯಾಸ ಮಾಡುತ್ತಿದ್ದ ಲೀ ವ್ಯಾನ್ ತಾಂತ್, ಕಬ್ಬಿಣದ ಸಲಾಕೆಯೊಂದನ್ನು ಕಣ್ಣಿನ ಅಂಚಿಗೆ ಚುಚ್ಚಿದಾಗ ನೋಡುತ್ತ ನಿಂತಿದ್ದವರು ಬೆಚ್ಚಿದರು. ಆದರೆ ಲೀ ವ್ಯಾನ್ ಮಾತ್ರ ನಿರ್ಭಾವುಕರಾಗಿ ಆ ಸಲಾಕೆಯನ್ನು ಬಾಗಿಸಲು ಪ್ರಯತ್ನಿಸುತ್ತಿದ್ದರು. ವರ್ಷಗಳಿಂದ ನಡೆಸಿದ ತಾಲೀಮು ಮತ್ತು ಗಿಟ್ಟಿಸಿಕೊಂಡಿದ್ದ ದೈಹಿಕ ತಾಕತ್ತಿನಿಂದಾಗಿ ಅವರಿಗೆ ಅದು ಸಾಧ್ಯವೂ ಆಯಿತು.

ಥೀನ್ ಮಾನ್ ಡೋ ಎಂಬ ಹೆಸರಿನಿಂದ ಕರೆಯಲಾಗುವ ಸಮರಕಲೆಯನ್ನು ಹಿಂದೆಲ್ಲ ಆಕ್ರಮಣಕಾರರಿಂದ ದೇಶವನ್ನು ರಕ್ಷಿಸಲು ಬಳಸುತ್ತಿದ್ದರು. ಆದರೆ ಈಗ ಆಧುನಿಕ ಜೀವನಶೈಲಿಯ ನಡುವೆ ಮಾನಸಿಕ ಒತ್ತಡದಿಂದ ಮುಕ್ತರಾಗಲು ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕುಂಗ್‌ಫು ಮತ್ತು ಆಯುಧಗಳ ಬಳಕೆ ಮಾಡುವುದನ್ನೂ ಕಲಿಸಲಾಗುತ್ತಿದ್ದು ನಿತ್ಯದ ಅಭ್ಯಾಸದಿಂದಾಗಿ ದೈಹಿಕವಾಗಿಯೂ ಮಾನಸಿಕವಾಗಿಯೂ ದೃಢರಾಗುತ್ತಿರುವುದಾಗಿ ಇದರಲ್ಲಿ ಪಾಲ್ಗೊಂಡಿರುವವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪೀಠೋಪಕರಣಗಳ ವ್ಯಾಪಾರಿ ಥಾಂಗ್ ಸಮರಕಲೆಯಿಂದ ವ್ಯಕ್ತಿತ್ವವೇ ಬದಲಾಗಿದೆ ಎಂದು ಹೇಳುತ್ತಾರೆ. ‘ಶಾಲಾ ದಿನಗಳಲ್ಲಿ ಇತರರೊಂದಿಗೆ ಕಾಲು ಕೆರೆದು ಜಗಳವಾಡುತ್ತಿದ್ದೆ. ಹೊಡೆದಾಟವೂ ಆಗುತ್ತಿತ್ತು. ಒಮ್ಮೆ ಮನೆಯಿಂದ ಹಣ ಕದ್ದೆ. ಸಿಕ್ಕಿಬಿದ್ದ ನನ್ನನ್ನು ಪಾಲಕರು ಥೀನ್ ಮಾನ್ ಡೋಗೆ ಸೇರಿಸಿದರು. ಈಗ ನಾನು ಸಂಪೂರ್ಣ ಬದಲಾಗಿದ್ದೇನೆ’ ಎಂದು ಅವರು ಅಭಿಪ್ರಾಯಪಟ್ಟರು.

ಹತ್ತನೇ ಶತಮಾನದ ‘ಕಲೆ’

ವಿಯೆಟ್ನಾಂನಲ್ಲಿ ಸಮರಕಲೆಯ ಈ ಮಾದರಿ 10ನೇ ಶತಮಾನದಲ್ಲೇ ಇತ್ತು. ಆದರೆ ಅಧಿಕೃತವಾಗಿ ಇದನ್ನು ಅಭ್ಯಾಸ ಮಾಡಲು ತೊಡಗಿದ್ದು 18ನೇ ಶತಮಾನದಲ್ಲಿ ಎನ್ನುತ್ತಾರೆ, ಹನೊಯ್ ಸಮೀಪದ ದೇವಸ್ಥಾನದ ಆವರಣದಲ್ಲಿ ಸಮರಕಲೆಯ ಶಾಲೆ ನಡೆಸುತ್ತಿರುವ‘ಮಾಸ್ಟರ್’ ಗಿಯೆನ್ ಕಾಚ್ ಫಾನ್.

‘ವಿಯೆಟ್ನಾಂನದಲ್ಲಿ ಸದ್ಯ 30 ಸಾವಿರ ಮಂದಿ ಸಮರಕಲೆ ಕಲಿಯುತ್ತಿದ್ದಾರೆ. ಜೀವನವನ್ನು ವಿಭಿನ್ನ ನೆಲೆಯಲ್ಲಿ ನೋಡುವಂತೆ ಮಾಡಲು ಸಮರಕಲೆ ನೆರವಾಗುತ್ತದೆ. 18 ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು ಏಳು ಬೆಲ್ಟ್‌ಗಳನ್ನು ಪ್ರದಾನ ಮಾಡಲಾಗುತ್ತದೆ' ಎಂದು ಅವರು ವಿವರಿಸಿದರು.

ದೇವಸ್ಥಾನವೊಂದರ ಆವರಣದಲ್ಲಿ 10 ಮಂದಿ ಮಹಿಳೆಯರೊಂದಿಗೆ ಅಭ್ಯಾಸ ಮಾಡುತ್ತಿದ್ದ 16 ವರ್ಷದ ವುಥೀ ಗೊಕ್ ಡೀಪ್ ‘ಸಮರಕಲೆಯಿಂದ ಲಿಂಗತಾರತಮ್ಯವನ್ನು ಮೆಟ್ಟಿನಿಲ್ಲಲು ಸಾಧ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.