ನವದೆಹಲಿ: ಭಾರತದ ಕ್ರೀಡಾ ಕ್ಷೇತ್ರದಲ್ಲಿ ಡೋಪಿಂಗ್ ಪಿಡುಗಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಉದ್ದೀಪನ ಮದ್ದು ತಡೆ (ಪರಿಷ್ಕೃತ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ಅವರು ಮಂಡಿಸಿದರು.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ಕ್ಕೆ ‘ಮುಕ್ತ ಕಾರ್ಯಾಚರಣೆ’ ಅವಕಾಶ ನೀಡಲು ಈ ಮಸೂದೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಘಟಕ)ದ ನಿಯಮಾವಳಿಗೆ ತಕ್ಕಂತೆ ಈ ಮಸೂದೆ ರೂಪಿಸಲಾಗಿದೆ.
ಈ ಮಸೂದೆಯಲ್ಲಿ ವಿವಾದಾತ್ಮಕ ಉದ್ದೀಪನ ಮದ್ದು ತಡೆ ರಾಷ್ಟ್ರೀ ಮಂಡಳಿಯನ್ನು ಉಳಿಸಿಕೊಳ್ಳಲಾಗಿದೆ. ಆದರೆ 2022ರ ಮೂಲ ಕಾಯಿದೆಯಲ್ಲಿದಂತೆ ನಾಡಾದ ಪ್ರಕರಣಗಳು ಈ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ.
ಅಲ್ಲದೇ 2022ರ ಕಾಯಿದೆಯನ್ನು ಜಾರಿಗೊಳಿಸಲೂ ಸಾಧ್ಯವಿಲ್ಲ. ಏಕೆಂದರೆ; ಇದರಲ್ಲಿ ‘ಸರಕಾರದ ಹಸ್ತಕ್ಷೇಪ’ ಇದೆ ಎಂದು ವಾಡಾ ತಕರಾರು ಮಾಡಿತ್ತು.
‘2022ರ ಕಾಯಿದೆಯನ್ನು ಜಾರಿಗೊಳಿಸಿದ್ದರೆ ವಾಡಾದಿಂದ ನಿಷೇಧಕ್ಕೊಳಗಾಗುವ ಆತಂಕವಿತ್ತು. ನಮ್ಮ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯದ ಮಾನ್ಯತೆಯೂ ರದ್ದಾಗುತ್ತಿತ್ತು. ಆದ್ದರಿಂದ ಕಾಯಿದೆಯಲ್ಲಿ ಪರಿಷ್ಕರಣೆಗಳು ಅಗತ್ಯವಾಗಿದ್ದವು’ ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ.
ಹೋದ ವರ್ಷ ವಾಡಾ ಪ್ರಕಟಿಸಿದ್ದ ಪಟ್ಟಿಯಲ್ಲಿ ಅತಿ ಹೆಚ್ಚು ಡೋಪಿಂಗ್ ಪ್ರಕರಣಗಳು ವರದಿಯಾದ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಈ ಪಿಡುಗಿಗೆ ಕಡಿವಾಣ ಹಾಕಲು ‘ಕಠಿಣ ಕ್ರಮ’ಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ವಾಗ್ದಾನ ಮಾಡಿತ್ತು.
2023ರ ಅಂಕಿ ಸಂಖ್ಯೆಗಳ ಪ್ರಕಾರ; ಭಾರತದ 5606 ಮಾದರಿಗಳಲ್ಲಿ ಅಥ್ಲೀಟ್‌ಗಳಲ್ಲಿ ನಿಷೇಧಿತ ಉದ್ದೀಪನ ಮದ್ದು ಬಳಕೆಯು ಶೇ 3.8ರಷ್ಟಿದೆ ಎಂದು ಅಡ್ವರ್ಸ್ ಅನಾಲಿಟಿಕಲ್ ಫೈಂಡಿಗ್ಸ್ (ಎಎಎಫ್) ಪ್ರಕಟಿಸಿತ್ತು. ಇದು 2022ರಲ್ಲಿದ್ದ 3865 ಪ್ರಕರಣಗಳಿಗಿಂತಲೂ ಹೆಚ್ಚು. ಎಎಎಫ್ ರೇಟ್ ಕೂಡ ಆ ವರ್ಷ ಶೇ 3.2ರಷ್ಟಿತ್ತು.
5606 ಮಾದರಿಗಳ ಪೈಕಿ 2748 ಮಾದರಿಗಳನ್ನು ಸ್ಪರ್ಧೆಗಳ ಸಂದರ್ಭಗಳಲ್ಲಿ ಸಂಗ್ರಹಿಸಲಾಗಿತ್ತು.
ನಿಷೇಧಿತ ಉದ್ದೀಪನ ಮದ್ದು ಬಳಕೆ ಪ್ರಮಾಣದಲ್ಲಿ ಭಾರತವು, ಚೀನಾ (28,197 ಮಾದರಿ; 0.2 ಎಎಎಫ್ ರೇಟ್), ಅಮೆರಿಕ (6798 ಮಾದರಿ, ಶೇ 1), ಫ್ರಾನ್ಸ್ (11,368 ಮಾದರಿ, ಶೇ 0.9), ಜರ್ಮನಿ (15,153 ಮಾದರಿಗಳಲ್ಲಿ; ಶೇ 0.4) ಮತ್ತು ರಷ್ಯಾ (10,395 ಮಾದರಿ, ಶೇ1) ದೇಶಗಳನ್ನೂ ಹಿಂದಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.