ನವದೆಹಲಿ: ಮುಂಬರುವ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಚುನಾವಣೆಗಳಿಗೆ, ಎಲೆಕ್ಟೊರಲ್ ಕಾಲೇಜು ಪಟ್ಟಿಯಿಂದ (ಮತದಾರರ ಪಟ್ಟಿ) ಮಾಜಿ ಕ್ರೀಡಾ ಸಚಿವ, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಹೆಸರನ್ನು ಕೈಬಿಡಲಾಗಿದೆ.
ಬಿಎಫ್‌ಐ ಅಧ್ಯಕ್ಷ, ಅಜಯ್ ಸಿಂಗ್ ಹೊರಡಿಸಿದ 60 ಸದಸ್ಯರ ಎಲೆಕ್ಟೊರಲ್ ಕಾಲೇಜು ಪಟ್ಟಿದಿಂದ ಠಾಕೂರ್ ಅವರ ಹೆಸರನ್ನು ಕೈಬಿಡಲಾಗಿದೆ. ಠಾಕೂರ್ ಅವರಿಂದ ಸಂವಿಧಾನ ಮತ್ತು ರಾಷ್ಟ್ರೀಯ ಕ್ರೀಡಾ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಫೆಡರೇಶನ್ ಚುನಾವಣೆಗೆ 'ಅನರ್ಹ' ಎಂದು ಹೇಳಿದ್ದಾರೆ.
ಈ ನಡುವೆ ಬಿಎಫ್‌ಐ ಕಾರ್ಯದರ್ಶಿ ಹೇಮಂತ ಕಲಿತಾ ಅವರು ಅನುರಾಗ್ ಠಾಕೂರ್ ಹೆಸರನ್ನು ಒಳಗೊಂಡ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದರು. ಆದರೆ ಚುನಾವಣಾ ಅಧಿಕಾರಿ ನ್ಯಾಯಮೂರ್ತಿ (ನಿವೃತ್ತ) ಆರ್.ಕೆ. ಗೌಬಾ ಅವರು ಹೊರಡಿಸಿದ ಆದೇಶದಲ್ಲಿ ಕಲಿತಾ ಬಿಡುಗಡೆ ಮಾಡಿದ ಮತ್ತೊಂದು ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಎಂದು ಹೇಳಿದ್ದಾರೆ.
ಬಿಎಫ್‌ಐ ಮಾರ್ಚ್ 7ರಂದು ಎಲ್ಲಾ ಸಂಯೋಜಿತ ರಾಜ್ಯ ಸಂಘಗಳಿಗೆ ನೋಟಿಸ್ ಕಳುಹಿಸಿತ್ತು. ರಾಜ್ಯ ಘಟಕಗಳ ಚುನಾವಣಾ ವಾರ್ಷಿಕ ಮಹಾಸಭೆಯ ಸಮಯದಲ್ಲಿ ಪ್ರಾಮಾಣಿಕ ಮತ್ತು ನಿಯಮನುಸಾರ ಆಯ್ಕೆಯಾದ ಚುನಾಯಿತ ಸದಸ್ಯರು ಮಾತ್ರ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸಲು ಅಧಿಕಾರ ಹೊಂದಿರುತ್ತಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು.
'ಠಾಕೂರ್ ಬಣದವರು ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ನಾವು ಸಾಕಷ್ಟು ಆಶಾವಾದಿಗಳಾಗಿದ್ದೇವೆ. ಅಗತ್ಯವಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಠಾಕೂರ್ ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಠಾಕೂರ್ 2008ರಿಂದ ಸದಸ್ಯರಾಗಿದ್ದಾರೆ' ಎಂದು ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಭಂಡಾರಿ ತಿಳಿಸಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 14ರಿಂದ 16ರವರೆಗೆ ಕಾಲಾವಕಾಶವಿದ್ದು, ಮಾರ್ಚ್ 28ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.