ADVERTISEMENT

ವಿಶ್ವಕಪ್ ಆರ್ಚರಿ: ಮಿಶ್ರ ವಿಭಾಗದ ಫೈನಲ್‌ಗೆ ದೀಪಿಕಾ–ದಾಸ್ ದಂಪತಿ

ಪಿಟಿಐ
Published 24 ಜೂನ್ 2021, 16:53 IST
Last Updated 24 ಜೂನ್ 2021, 16:53 IST
ಅತನು ದಾಸ್
ಅತನು ದಾಸ್   

ಪ್ಯಾರಿಸ್: ಅತನು ದಾಸ್ ಮತ್ತು ದೀಪಿಕಾಕುಮಾರಿ ದಂಪತಿಯು ಇಲ್ಲಿ ನಡೆಯುತ್ತಿರುವ ವಿಶ್ವಕಪ್ (ಸ್ಟೇಜ್ 3) ಆರ್ಚರಿಯ ಮಿಶ್ರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.

ಗುರುವಾರ ನಡೆದ ಸುತ್ತಿನಲ್ಲಿ ಭಾರತದ ಜೋಡಿಯು 5–3 ರಿಂದ ಸ್ಪೇನ್ ಜೋಡಿಯನ್ನು ಮಣಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ದೀಪಿಕಾ–ದಾಸ್ ಜೋಡಿಯು ನೆದರ್ಲೆಂಡ್ಸ್‌ ಸವಾಲನ್ನು ಎದುರಿಸಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ದೀಪಿಕಾ ವೈಯಕ್ತಿಕ ವಿಭಾಗದ ಸೆಮಿಫೈನಲ್‌ಗೂ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಅವರಿಂದ ಎರಡು ಪದಕಗಳ ಸಾಧನೆಯಾಗುವ ಅವಕಾಶ ಒದಗಿದೆ.

ADVERTISEMENT

ಮಿಶ್ರ ವಿಭಾಗದಲ್ಲಿ ದೀಪಿಕಾ–ದಾಸ್ ಜೋಡಿಯು ಅರ್ಹತಾ ಸುತ್ತಿನಲ್ಲಿ ಐದನೇ ರ‍್ಯಾಂಕ್ ಪಡೆದಿತ್ತು. ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು.

ಗುರುವಾರ ನಡೆದ ಆರಂಭಿಕ ಸುತ್ತಿನಲ್ಲಿ ಸ್ಪೇನ್‌ ದೇಶದ ಡೇನಿಯಲ್ ಕ್ಯಾಸ್ಟ್ರೊ ಮತ್ತು ಐನೆಸ್ ಡಿ ವೆಲಾಸ್ಕೊ ಅವರಿಂದ ಭಾರತೀಯ ಜೋಡಿಯು ಕಠಿಣ ಸ್ಪರ್ಧೆ ಎದುರಿಸಿತು.ಸ್ಪೇನ್ ಜೋಡಿಯು 38–36 ರಿಂದ ಮುನ್ನಡೆ ಸಾಧಿಸಿತು.

ತಿರುಗೇಟು ನೀಡಿದ ಭಾರತದ ಜೋಡಿಯು ನಿರಂತರವಾಗಿ ನಿಖರ ಗುರಿ (9–9–9–10) ಸಾಧನೆ ಮಾಡಿ, ಸಮಬಲದ ಸ್ಪರ್ಧೆಯೊಡ್ಡಿತು. ಮೂರನೇ ಸೆಟ್‌ನಲ್ಲಿ ಮೂರು ಬಾರಿ ಸಂಪೂರ್ಣ ಹತ್ತು ಮತ್ತೊಂದರಲ್ಲಿ ಒಂಬತ್ತು ಅಂಕ ಗಳಿಸಿ ಗೆದ್ದಿತು.

‘ಈ ಗೆಲುವು ನಮಗೆ ಮಹತ್ವದ್ದಾಗಿತ್ತು. ನಮ್ಮ ಗುರಿ ನಿಖರವಾಗಿದ್ದವು. ನಮ್ಮಿಬ್ಬರಲ್ಲಿ ಉತ್ತಮ ಸಂವಹನ ಮತ್ತು ಹೊಂದಾಣಿಕೆ ಇದೆ. ಇಬ್ಬರೂ ವೃತ್ತಿಪರ ಆರ್ಚರಿಪಟುಗಳಾಗಿ ತಂಡವನ್ನು ಬಲಿಷ್ಠಗೊಳಿಸಿದ್ದೇವೆ‘ ಎಂದು ದೀಪಿಕಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.