ADVERTISEMENT

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 13:42 IST
Last Updated 25 ಏಪ್ರಿಲ್ 2024, 13:42 IST
ಜ್ಯೋತಿ ಸುರೇಖಾ ವೆಣ್ಣಂ
ಎಎಫ್‌ಪಿ ಚಿತ್ರ
ಜ್ಯೋತಿ ಸುರೇಖಾ ವೆಣ್ಣಂ ಎಎಫ್‌ಪಿ ಚಿತ್ರ   

ಶಾಂಘೈ: ತರುಣದೀಪ್‌ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ, ಆರ್ಚರಿ (ಬಿಲ್ಗಾರಿಕೆ) ವಿಶ್ವ ಕಪ್‌ನ (ಸ್ಟೇಜ್‌ 1) ಪುರುಷರ ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಒಲಿಂಪಿಕ್‌ ಚಾಂಪಿಯನ್ ಕೊರಿಯಾ ತಂಡವನ್ನು ಎದುರಿಸಲಿದೆ.

ಕಾಂಪೌಂಡ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಫೈನಲ್ ತಲುಪಿ ಕಡೇಪಕ್ಷ ಎರಡು ಪದಕಗಳು ಖಚಿತವಾದ ಮರುದಿನವೇ ಭಾರತಕ್ಕೆ ಇನ್ನೊಂದು ಪದಕ ಗ್ಯಾರಂಟಿ ಆಗಿದೆ.

ಅಂತಿಮ ನಾಲ್ಕರ ಹಂತದಲ್ಲಿ ಭಾರತ 5–1 ರಿಂದ (55–53, 55–55, 56–55) ಇಟಲಿ ತಂಡವನ್ನು ಸೋಲಿಸಿತು. ವಿಶ್ವ ಮತ್ತು ಒಲಿಂಪಿಕ್ ಚಿನ್ನ ಗೆದ್ದ ತಂಡದಲ್ಲಿದ್ದ ಕಿಮ್‌ ವೂಜಿನ್‌, ಲೀ ವೂ ಸಿಯೊಕ್ ಮತ್ತು ಕಿಮ್‌ ಜೆ ದಿಯೊಕ್ ಅವರು ಭಾನುವಾರ ನಿಗದಿ ಆಗಿರುವ ಫೈನಲ್‌ನಲ್ಲೂ ಕಣಕ್ಕಿಳಿಯಲಿದ್ದಾರೆ.

ADVERTISEMENT

‌ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಎರಡನೇ ಶ್ರೇಯಾಂಕದ ಭಾರತ ತಂಡ 5–3 ರಿಂದ ಇಂಡೊನೇಷ್ಯಾ ತಂಡವನ್ನು ಸೋಲಿಸಿತ್ತು. ಏಳನೇ ಶ್ರೇಯಾಂಕದ ಸ್ಪೇನ್ ವಿರುದ್ಧವೂ ಭಾರತ ಉತ್ತಮ ಪ್ರದರ್ಶನ ನೀಡಿ 5–1 ರಲ್ಲಿ ಜಯಗಳಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದಿತ್ತು.

ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ, ಮಾಜಿ ವಿಶ್ವ ಯೂತ್ ಚಾಂಪಿಯನ್ ಪ್ರಿಯಾಂಶ್ ಮತ್ತು ಏಷ್ಯನ್ ಗೇಮ್ಸ್‌ ಸ್ವರ್ಣ ವಿಜೇತೆ ಜ್ಯೋತಿ ಸುರೇಖಾ ವೆಣ್ಣಮ್ ಅವರು ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದ್ದು, ಪದಕದ ಅವಕಾಶ ಹೊಂದಿದ್ದಾರೆ.

ಆರನೇ ಕ್ರಮಾಂಕದ ಭಾರತ ಮಹಿಳಾ ತಂಡ (ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಭಜನ್‌ ಕೌರ್‌) ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದೇ ಮೊದಲ ಪಂದ್ಯದಲ್ಲೇ ಮೆಕ್ಸಿಕೊ ಎದುರು 1–3 ರಲ್ಲಿ ಸೋಲು ಕಂಡಿತು. ಇಲ್ಲೂ ಮೊದಲ ಸುತ್ತಿನಲ್ಲಿ ಭಾರತಕ್ಕೆ ಬೈ ದೊರಕಿತ್ತು.

ನಂತರ, ವಿಶ್ವ ಕಪ್ ಚಿನ್ನ ವಿಜೇತೆ ಜ್ಯೋತಿ 143–142 ರಿಂದ ಸ್ವದೇಶದ ಅವನೀತ್ ಕೌರ್ ಅವರನ್ನು ಸೋಲಿಸಿ ಕಾಂಪೌಂಡ್ ವೈಯಕ್ತಿಕ ಸೆಮಿಫೈನಲ್ ಪ್ರವೇಶಿಸಿದರು.

ಭಾರತದ ಇನ್ನೊಬ್ಬ ಸ್ಪರ್ಧಿ, ಹಾಲಿ ವಿಶ್ವ ಚಾಂಪಿಯನ್ ಅದಿ ಸ್ವಾಮಿ 142–144ರಲ್ಲಿ ಅಗ್ರ ಶ್ರೇಯಾಂಕದ ಆಂಡ್ರಿಯಾ ಬೆಸೆರ್ರಾ (ಮೆಕ್ಸಿಕೊ) ಅವರಿಗೆ ಮಣಿದರು.

14ನೇ ಶ್ರೇಯಾಂಕದ ಪ್ರಿಯಾಂಶ್ ಅವರು ಟರ್ಕಿಯ ಬತುಹಾನ್ ಅಕ್ರಾಗ್ಲು ಅವರನ್ನು ಸೋಲಿಸಿದರು. ಅವರು ನಾಲ್ಕರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ನಿಕ್ ಕ್ಯಾಪ್ಪರ್ಸ್‌ ಅವರನ್ನು ಎದುರಿಸಲಿದ್ದಾರೆ.

ಅಭಿಷೇಕ್‌ ವರ್ಮಾ ಎರಡನೇ ಸುತ್ತಿನಲ್ಲೇ ಹೊರಬಿದ್ದರು. ಅವರು ಫ್ರಾನ್ಸ್‌ನ ಜೀನ್‌ ಫಿಲಿಪ್‌ ಬಾಲ್ಚ್‌ ಅವರಿಗೆ ಮಣಿದರು. ಕಣದಲ್ಲಿದ್ದ ಭಾರತದ ನಾಲ್ಕನೇ ಆಟಗಾರ ರಜತ್ ಚೌಹಾನ್ ಅವರು ಪ್ರಿಯಾಂಶ್ ಅವರಿಗೆ ಎರಡನೇ ಸುತ್ತಿನಲ್ಲಿ ಮಣಿದು ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.