ADVERTISEMENT

ರಾಷ್ಟ್ರೀಯ ಸೀನಿಯರ್ ಕುಸ್ತಿಗೆ 700 ಸ್ಪರ್ಧಿಗಳು: ಡಬ್ಲ್ಯುಎಫ್‌ಐ

ಅಮಾನತುಗೊಂಡ ಸಮಿತಿಯಿಂದ ಪುಣೆಯಲ್ಲಿ ಆಯೋಜನೆ;

ಪಿಟಿಐ
Published 27 ಜನವರಿ 2024, 15:23 IST
Last Updated 27 ಜನವರಿ 2024, 15:23 IST
ಸಂಜಯ್‌ ಸಿಂಗ್‌
ಸಂಜಯ್‌ ಸಿಂಗ್‌   

ನವದೆಹಲಿ: ಸೋಮವಾರದಿಂದ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 700 ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. ಒಡಿಶಾ ಮತ್ತು ಪಂಜಾಬ್ ರಾಜ್ಯದ ಕುಸ್ತಿಪಟುಗಳು ಭಾಗವಹಿಸುತ್ತಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಅಮಾನತುಗೊಂಡಿರುವ ಆಡಳಿತ ಮಂಡಳಿ ಶನಿವಾರ ತಿಳಿಸಿದೆ. 

ಡಿಸೆಂಬರ್ ಕೊನೆ ವಾರದಲ್ಲಿ ಉತ್ತರ ಪ್ರದೇಶದ ಗೊಂಡಾದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌  ನಡೆಸುವುದಾಗಿ ಘೋಷಿಸಿದ ನಂತರ  ನಿಯಮ ಉಲ್ಲಂಘನೆ ಕಾರಣಕ್ಕೆ ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯವು ಡಿಸೆಂಬರ್ 24 ರಂದು ಅಮಾನತುಗೊಳಿಸಿತ್ತು. ಡಬ್ಲ್ಯುಎಫ್ಐ ಆಯೋಜಿಸುವ ಕ್ರೀಡಾಕೂಟಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿತ್ತು.

ಆದಾಗ್ಯೂ, ಡಬ್ಲ್ಯುಎಫ್‌ಐ ಕೂಟ ಆಯೋಜಿಸುವ ಮೂಲಕ ಕ್ರೀಡಾ ಸಚಿವಾಲಯಕ್ಕೆ ಸಡ್ಡು ಹೊಡೆದಿದೆ.  

ADVERTISEMENT

‘ಡಬ್ಲ್ಯುಎಫ್ಐ 2023ರ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫ್ರೀಸ್ಟೈಲ್, ಗ್ರೀಕೊ ರೋಮನ್ ಮತ್ತು ಮಹಿಳಾ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಜನವರಿ 29 ರಿಂದ 31ರ ವರೆಗೆ ಪುಣೆಯಲ್ಲಿ ಮಹಾರಾಷ್ಟ್ರ ರಾಜ್ಯ ಕುಸ್ತಿಗಿರಿ ಸಂಘ ಈ ಚಾಂಪಿಯನ್‌ಷಿಪ್ ಆಯೋಜಿಸಿದೆ’ ಎಂದು ಅಮಾನತುಗೊಂಡಿರುವ ಮಂಡಳಿ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 700 ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ. ಪಂಜಾಬ್ ಮತ್ತು ಒಡಿಶಾ ಹೊರತುಪಡಿಸಿ ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಎಲ್ಲಾ ನೋಂದಾಯಿತ ರಾಜ್ಯ ಸಂಸ್ಥೆಗಳು ತನ್ನ ತಂಡಗಳನ್ನು ಕಳುಹಿಸುತ್ತಿವೆ’ ಎಂದು ಹೇಳಿದ್ದಾರೆ.  

ಭೂಪೇಂದ್ರ ಸಿಂಗ್ ಬಾಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯು ಫೆಬ್ರವರಿ 2 ರಿಂದ 5ರ ವರೆಗೆ ಜೈಪುರದಲ್ಲಿ ಪ್ರತ್ಯೇಕ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್ ನಡೆಸುವುದಾಗಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.