ADVERTISEMENT

ಐಎಎಎಫ್‌ ಕಪ್‌: ಅರ್ಪಿಂದರ್‌ಗೆ ಕಂಚಿನ ಪದಕ

ಪಿಟಿಐ
Published 9 ಸೆಪ್ಟೆಂಬರ್ 2018, 19:28 IST
Last Updated 9 ಸೆಪ್ಟೆಂಬರ್ 2018, 19:28 IST

ಒಸ್ತ್ರಾವ, ಜೆಕ್‌ ರಿಪಬ್ಲಿಕ್‌: ಭಾರತದ ಟ್ರಿಪಲ್‌ ಜಂಪ್‌ ಅಥ್ಲೀಟ್‌ ಅರ್ಪಿಂದರ್‌ ಸಿಂಗ್‌ ಅವರು ಐಎಎಎಫ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಪದಕ ಗೆದ್ದ ಭಾರತದ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪುರುಷರ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಅರ್ಪಿಂದರ್‌ ಅವರು 16.33 ಮೀಟರ್ಸ್‌ ದೂರ ಜಿಗಿದರು. 25 ವರ್ಷದ ಅಥ್ಲೀಟ್‌ ಏಷ್ಯಾ–ಪೆಸಿಫಿಕ್‌ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ16.77 ಮೀಟರ್ಸ್‌ ದೂರ ಜಿಗಿದಿದ್ದ ಅವರು ಚಿನ್ನದ ಸಾಧನೆ ಮಾಡಿದ್ದರು.

ಅಮೆರಿಕದ ಕ್ರಿಸ್ಟಿಯನ್‌ ಟೇಲರ್‌ ಹಾಗೂ ಬುರ್ಕಿನಾ ಫಾಸೊದ ಹ್ಯೂಸ್‌ ಫಾಬ್ರಿಸ್‌ ಜಾಂಗೊ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಜಯಿಸಿದರು.ಏಷ್ಯನ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌ ಚೋಪ್ರಾ ಅವರು ನಿರಾಸೆ ಅನುಭವಿಸಿದರು. ಅವರು 80.24 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಆರನೇ ಸ್ಥಾನ ಪಡೆದರು.

ADVERTISEMENT

ಪುರುಷರ 400 ಮೀಟರ್ಸ್‌ ಓಟದಲ್ಲಿ ಭಾರತದ ಮೊಹಮ್ಮದ್‌ ಅನಾಸ್‌ ಅವರು ಐದನೇ ಸ್ಥಾನ ಗಳಿಸಿದರು. ಅವರು 45.72 ಸೆಕೆಂಡುಗಳಲ್ಲಿ ಗುರಿ ತಲುಪಿದರು.

1500 ಮೀಟರ್ಸ್‌ ಸ್ಪರ್ಧೆಯಲ್ಲಿ ಜಿನ್ಸನ್‌ ಜಾನ್ಸನ್‌ ಅವರು ಆರನೇ ಸ್ಥಾನ ಗಳಿಸಿದರು. ಅವರು 3 ನಿಮಿಷ 41.72 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.