ADVERTISEMENT

ಒಲಿಂಪಿಕ್ಸ್ ರದ್ದುಪಡಿಸಲು ಒತ್ತಾಯಿಸಿದ ‘ಅಸಾಹಿ ಶಿಂಬುನ್’

ಏಜೆನ್ಸೀಸ್
Published 26 ಮೇ 2021, 22:17 IST
Last Updated 26 ಮೇ 2021, 22:17 IST
ಒಲಿಂಪಿಕ್ಸ್ ರಿಂಗ್ಸ್
ಒಲಿಂಪಿಕ್ಸ್ ರಿಂಗ್ಸ್   

ಟೋಕಿಯೊ: ಒಲಿಂಪಿಕ್‌ ಕ್ರೀಡಾಕೂಟವನ್ನು ರದ್ದುಪಡಿಸುವಂತೆ ದಿನೇ ದಿನೇ ಒತ್ತಡ ಹೆಚ್ಚುತ್ತಿದೆ.ಜಪಾನ್‌ನ ಪ್ರತಿಷ್ಠಿತ ಅಸಾಹಿ ಶಿಂಬುನ್‌ ದಿನಪತ್ರಿಕೆ ಈ ಒತ್ತಾಯಕ್ಕೆ ದನಿಗೂಡಿಸಿದೆ. ಕ್ರೀಡಾಕೂಟ ರದ್ದುಪಡಿಸುವಂತೆ ಒತ್ತಾಯಿಸಿದ ಜಪಾನ್‌ನ ಪ್ರಮುಖ ದಿನಪತ್ರಿಕೆಗಳಲ್ಲಿ ಇದು ಮೊದಲನೆಯದಾಗಿದೆ. ಹಲವು ಪ್ರಾದೇಶಿಕ ದಿನಪತ್ರಿಕೆಗಳು ಸಹ ಒಲಿಂಪಿಕ್‌ ಆಯೋಜಿಸದಂತೆ ಒತ್ತಾಯಿಸಿದ್ದವು.

‘ಈ ಬೇಸಿಗೆಯಲ್ಲಿ ಒಲಿಂಪಿಕ್‌ ಆಯೋಜಿಸುವುದು ಸಮಂಜಸವಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಬೇಸಿಗೆಯಲ್ಲಿ ನಡೆಯುವ ಕ್ರೀಡಾಕೂಟವನ್ನು ರದ್ದುಪಡಿಸುವ ಬಗ್ಗೆ ಪ್ರಧಾನಿ ಸುಗಾ ಅವರು ನಿರ್ಧಾರ ಕೈಗೊಳ್ಳಬೇಕು’ ಎಂದು ಅಸಾಹಿ ಶಿಂಬುನ್‌ ದಿನಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಜೂನ್‌ ತಿಂಗಳ ಅಂತ್ಯದಲ್ಲಿ ಕ್ರೀಡಾಕೂಟದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯ ರಿಚರ್ಡ್‌ ಪೌಂಡ್‌ ತಿಳಿಸಿದ್ದಾರೆ.

ADVERTISEMENT

ಅಸಾಹಿ ಶಿಂಬುನ್‌ ಬೆಳಿಗ್ಗೆಯ ದಿನಪತ್ರಿಕೆಯು 51.6 ಲಕ್ಷ ಪ್ರಸಾರವನ್ನು ಹೊಂದಿದೆ. ಸಂಜೆ ಪತ್ರಿಕೆಯು 15.5 ಲಕ್ಷ ಪ್ರಸಾರವನ್ನು ಹೊಂದಿದೆ.

ಸಂಪಾದಕೀಯದ ಹೊರತಾಗಿಯೂ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಥವಾ ಸ್ಥಳೀಯ ಆಯೋಜಕರು ಕೂಟವನ್ನು ರದ್ದು ಅಥವಾ ಮುಂದೂಡುವ ಚಿಂತನೆ ಹೊಂದಿಲ್ಲ. ಆದರೆ ಜಪಾನ್‌ನಲ್ಲಿ ಬಹಳಷ್ಟು ಜನರು ಇನ್ನೂ ಲಸಿಕೆ ಪಡೆದಿಲ್ಲವಾದ್ದರಿಂದ ಕೂಟಕ್ಕೆ ವಿರೋಧ ಹೆಚ್ಚುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.