ಚೆಂಗ್ಡು: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ದೀಕ್ಷಾ ಸುಧಾಕರ್ ಹಾಗೂ ಶೈನಾ ಮಣಿಮುತ್ತು ಅವರು 17 ಮತ್ತು 15 ವರ್ಷದೊಳಗಿನವರ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅದರೊಂದಿಗೆ, ಈ ಬಾರಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದ ಭಾರತವು ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿಯೇ ಅತ್ಯುತ್ತಮ ಸಾಧನೆ ತೋರಿತು.
ಭಾನುವಾರ ನಡೆದ 17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ದೀಕ್ಷಾ ಅವರು 21–16, 21–9ರಿಂದ ಸ್ವದೇಶದ ಲಕ್ಷ್ಯಾ ರಾಜೇಶ್ ವಿರುದ್ಧ ಗೆಲುವು ಸಾಧಿಸಿದರು. ಅದರೊಂದಿಗೆ ದೀಕ್ಷಾ ಅವರು ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೂ ಭಾಜನರಾದರು.
15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ಶೈನಾ ಅವರು 21–14, 22–20ರಿಂದ ಜಪಾನ್‌ನ ಚಿಹಾರು ತೊಮೀಟಾ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. 44 ನಿಮಿಷ ನಡೆದ ರೋಚಕ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಭಾರತವು 2013ರಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಿರಿಲ್ ವರ್ಮಾ ಸ್ವರ್ಣ ಗೆದ್ದರೆ, 17 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ– ಎಂ.ಆರ್.ಅರ್ಜುನ್ ಜೋಡಿ ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.