ಸೊಲೊ (ಇಂಡೊನೇಷ್ಯಾ): ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ಡಿ ಗುಂಪಿನಲ್ಲಿ ಗ್ರಸ್ಥಾನ ಗಳಿಸಿತು. ಭಾನುವಾರ ನಡೆದ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ 110–100 ರಿಂದ ಹಾಂಗ್ ಕಾಂಗ್ ತಂಡವನ್ನು ಸೋಲಿಸಿತು.
ಭಾರತ ಮತ್ತು ಹಾಂಗ್ ಕಾಂಗ್ ತಂಡಗಳು ಈ ಮೊದಲೇ ಡಿ ಗುಂಪಿನಿಂದ ನಾಕೌಟ್‌ಗೆ ಸ್ಥಾನ ಕಾದಿರಿಸಿದ್ದವು. ಭಾರತ ತಂಡವು ಸೋಮವಾರ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.
ಮೊದಲ ಬಾರಿ ಈ ಟೂರ್ನಿಯಲ್ಲಿ ಆಡುತ್ತಿರುವ ಕರ್ನಾಟಕದ ರುಜುಲಾ ರಾಮು 11–8 ರಿಂದ ಐಪಿ ಸುಮ್ ಯಾವು ಅವರನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಭಾರ್ಗವ್ ರಾಮ್ ಅರಿಗೆಲಾ ಮತ್ತು ವಿಶ್ವ ತೇಜ್ ಗೊಬ್ಬರು 22–13 ರಿಂದ ಚಿಯುಂಗ್ ಸಾಯಿ ಶಿಂಗ್ ಮತ್ತು ಡೆಂಗ್ ಚಿ ಫೈ ಅವರನ್ನು ಸೋಲಿಸಿ ಭಾರತದ ಮುನ್ನಡೆ ಹೆಚ್ಚಿಸಿದರು.
ಹಾಂಗ್ ಕಾಂಗ್‌ನ ಲಾಮ್ ಕಾ ತೊ ಅವರು ಭಾರತದ ರೌಬನಕ್ ಚೌಹಾನ್ ಎದುರು ಸೋತರೂ ಹಿನ್ನಡೆ ತಗ್ಗಿಸಿದರು. ಐದು ಪಂದ್ಯಗಳ ನಂತರ ಎರಡು ತಂಡಗಳ ಅಂತರ 55–49ಕ್ಕೆ ತಗ್ಗಿತ್ತು. ವಿಶ್ವದ ಅಗ್ರ ಜೂನಿಯರ್ ಆಟಗಾರ್ತಿ ತನ್ವಿ ಶರ್ಮಾ ಅವರು ಲಿಯು ಹೊಯ್ ಕಿಯು ಆ್ಯನಾ ಅವರನ್ನು ಸೋಲಿಸಿ ಭಾರತಕ್ಕೆ ಹಿಡಿತ ಒದಗಿಸಿದರು. ಮುಂದಿನ ನಾಲ್ಕು ಪಂದ್ಯಗಳು ಹೋರಾಟದಿಂದ ಕೂಡಿದ್ದರೂ ಭಾರತದ ಗೆಲುವಿಗೆ ಸಮಸ್ಯೆಯಾಗಲಿಲ್ಲ.
‘ಎ’ ಗುಂಪಿನಲ್ಲಿ ಥಾಯ್ಲೆಂಡ್ ಮೊದಲ ಸ್ಥಾನವನ್ನು, ಜಪಾನ್ ಎರಡನೇ ಸ್ಥಾನವನ್ನು ಪಡೆದವು.
2011ರಲ್ಲಿ ಕಂಚಿನ ಪದಕ ಗೆದ್ದಿರುವುದು ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಉತ್ತಮ ಸಾಧನೆಯಾಗಿದೆ.
2024ರಲ್ಲಿ ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾ ಎದುರು ಹೋರಾಟ ತೋರಿದರೂ ಅಂತಿಮವಾಗಿ 2–3 ರಿಂದ ಸೋತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.