ಅಹಮದಾಬಾದ್: ಎರಡು ಬಾರಿಯ ಒಲಿಂಪಿಯನ್ನರಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಅವರು ಭಾನುವಾರ ಇಲ್ಲಿ ಆರಂಭವಾಗುವ 11ನೇ ಏಷ್ಯನ್ ಅಕ್ವೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ನರನ್‌ಪುರದಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಈ ಕೂಟದಲ್ಲಿ ಭಾರತದ 40 ಮಂದಿ ಈಜು ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ. 20 ಮಂದಿ ಪುರುಷರ ಮತ್ತು 20 ಮಂದಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಭಾರತ ತಂಡದ ಈಜುಪಟುಗಳು ಒಂದು ತಿಂಗಳಿಂದ ಇಲ್ಲಿ ಉಳಿದುಕೊಂಡಿದ್ದು, ರಾಷ್ಟ್ರೀಯ ಶಿಬಿರದಲ್ಲಿ ಭಾಗಿಯಾಗಿದ್ದಾರೆ.
29 ದೇಶಗಳ 1100 ಸ್ಪರ್ಧಿಗಳು, ತರಬೇತುದಾರರು, ತಾಂತ್ರಿಕ ಸಿಬ್ಬಂದಿ ಸ್ಪರ್ಧಿಸಲಿದ್ದಾರೆ. ಇದು ಜಪಾನ್‌ನ ನಗೊಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಅರ್ಹತಾ ಟೂರ್ನಿಯಾಗಿದೆ.
ಸಜನ್, ನಟರಾಜ್, ಧಿನಿಧಿ ದೆಸಿಂಘು ಜೊತೆ ಭವ್ಯಾ ಸಚದೇವ ಅವರೂ ಪದಕದ ಭರವಸೆಯಾಗಿದ್ದಾರೆ.
ಈ ಕೂಟದಲ್ಲಿ ಇದುವರೆಗೆ ಚೀನಾ ಉತ್ತಮ ಸಾಧನೆ ತೋರುತ್ತ ಬಂದಿದೆ.
‘ಈ ಕೂಟಕ್ಕೆ ಉತ್ತಮವಾಗಿ ಸಜ್ಜಾಗಿದ್ದೇವೆ. ಇಲ್ಲಿನ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಈಜುಪಟುಗಳು ಇಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆಯಿದೆ. ಪ್ರಕಾಶ್, ನಟರಾಜ್ ಮತ್ತು ರೋಹಿತ್ ಬಿ.ಬೆನೆಡಿಕ್ಷನ್ ಸಹ ತಮ್ಮ ಸ್ಪರ್ಧೆಗಳಲ್ಲಿ ಪದಕ ಗೆಲ್ಲಬಹುದು’ ಎಂದು ಭಾರತ ತಂಡದ ಹೆಡ್ ಕೋಚ್ ನಿಹಾರ್ ಅಮೀನ್ ತಿಳಿಸಿದರು.
200 ಮೀ. ಬಟರ್‌ಫ್ಲೈನಲ್ಲಿ ಸಜನ್, 100 ಮೀ. ಮತ್ತು 200 ಮೀ. ಬ್ಯಾಕ್ ಸಸ್ಟ್ರೋಕ್‌ನಲ್ಲಿ ಶ್ರೀಹರಿ, 200 ಮೀ. ಫ್ರೀಸ್ಟೈಲ್‌ನಲ್ಲಿ ರೋಹಿತ್ ಅವರಿಂದ ಪದಕ ನಿರೀಕ್ಷೆಯಿದೆ ಎಂದು ಅಮೀನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.