ಬ್ಯಾಂಕಾಕ್ : ಭಾರತದ ಷಾಟ್‌ಪಟ್ ಎಸೆಗಾರ ತಜಿಂದರ್‌ಪಾಲ್ ಸಿಂಗ್ ತೂರ್ ನಿರೀಕ್ಷೆಯಂತೆ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮುಂದುವರಿಸಿ ಶುಕ್ರವಾರ ಚಿನ್ನದ ಪದಕ ಗೆದ್ದುಕೊಂಡರು. ಪಾರುಲ್ ಚೌಧರಿ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಅಂತರರಾಷ್ಟ್ರೀಯ ಕೂಟದಲ್ಲಿ ಮೊದಲ ಚಿನ್ನ ಗೆದ್ದರು.
ಶೈಲಿ ಸಿಂಗ್ ಮೊದಲ ಅಂತರರಾಷ್ಟ್ರೀಯ ಕೂಟದಲ್ಲೇ ಲಾಂಗ್‌ಜಂಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಭಾರತ ಮೂರನೇ ದಿನದ ಕೊನೆಗೆ ಐದು ಚಿನ್ನ, ಒಂದು ಬೆಳ್ಳಿ, ಮೂರು ಕಂಚಿನ ಪದಕಗಳನ್ನು ಗಳಿಸಿದೆ.
28 ವರ್ಷದ ತಜಿಂದರ್ ಎರಡನೇ ಯತ್ನದಲ್ಲೇ ಗುಂಡನ್ನು 20.23 ಮೀಟರ್ ದೂರ ಎಸೆದಿದ್ದು, ಚಿನ್ನ ಗೆಲ್ಲಲು ಅದು ಧಾರಾಳ ಎನಿಸಿತು. ಆದರೆ ಸ್ಪರ್ಧೆ ಮುಂದುವರಿಸದೇ ತೊಡೆಯನ್ನು ಹಿಡಿದುಕೊಂಡು ಕುಂಟುತ್ತಾ ಹೊರನಡೆದರು.
ಕಳೆದ ತಿಂಗಳು ಭುವನೇಶ್ವರದ ಅಂತರರಾಜ್ಯ ಕೂಟದಲ್ಲಿ ಏಷ್ಯನ್ ದಾಖಲೆ (21.77 ಮೀ.) ಸ್ಥಾಪಿಸಿದ್ದ ತೂರ್ ಅವರು ವಿಶ್ವಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದರು.
ಇರಾನ್‌ನ ಸುಬೆರಿ ಮೆಹದಿ (19.98 ಮೀ.) ಮತ್ತು ಕಜಕಸ್ತಾನದ ಇವಾನ್ ಇವಾನೋವ್ (19.87 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು.
ಚಿನ್ನಕ್ಕೆ ನೆಚ್ಚಿನ ಸ್ಪರ್ಧಿಯಾಗಿದ್ದ ತೂರ್ ಮೊದಲ ಯತ್ನದಲ್ಲಿ ಗುಂಡನ್ನು 19.80 ಮೀ. ದೂರಕ್ಕೆಸೆದಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಉಳಿಸಿಕೊಂಡ ಮೂರನೇ ಷಾಟಪಟ್ ಎಸೆತಗಾರ ಎನಿಸಿದರು.
ತೂರ್ ಅವರ ಗಾಯದ ತೀವ್ರತೆ ಗೊತ್ತಾಗಿಲ್ಲ. ಆದರೆ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ಆಗಸ್ಟ್ 19ರಿಂದ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಸಮೀಪಿಸುತ್ತಿರುವಂತೆ ಹೀಗೆ ಆಗಿರುವುದು ಅವರ ಕಳವಳಕ್ಕೆ ಕಾರಣವಾಗಿದೆ.
ಮಿಂಚಿದ ಪಾರುಲ್:
ಈ ವರ್ಷದ ಆರಂಭದಲ್ಲಿ ಅಮೆರಿಕದಲ್ಲಿ ತರಬೇತಿ ಪಡೆದಿದ್ದ 28 ವರ್ಷದ ಪಾರುಲ್, ತಮ್ಮ ಸ್ಪರ್ಧೆಯನ್ನು 9ನಿ.38.76 ಸೆ.ಗಳಲ್ಲಿ ಕ್ರಮಿಸಿ ಆರಾಮವಾಗಿ ಚಿನ್ನ ಗೆದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (9:29.51 ಸೆ.) ಕಡಿಮೆ. ಚೀನಾದ ಶುವಾಂಗ್ ಶುವಾಂಗ್ ಕ್ಸು (9:44.54) ಮತ್ತು ಜಪಾನ್‌ನ ಯೊಶಿಮುರಿ ರೀಮಿ (9:48.48ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
ಮೊದಲ ಬಾರಿ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ಅನ್ನು 2007ರ ಕೂಟದಲ್ಲಿ ಪರಿಚಯಿಸಲಾಗಿತ್ತು. ನಂತರ ಭಾರತದ ಸ್ಪರ್ಧಿಗಳೇ ಗಮನ ಸೆಳೆದಿದ್ದಾರೆ. ಸುಧಾ ಸಿಂಗ್ (2013 ಮತ್ತು 17), ಲಲಿತಾ ಬಾಬರ್ (2015) ಈ ಹಿಂದೆ ಚಿನ್ನಗಳನ್ನು ಗೆದ್ದಿದ್ದರು. ಚೌಧರಿ 2017ರಲ್ಲಿ ನಾಲ್ಕನೇ ಮತ್ತು 2019ರಲ್ಲಿ ಐದನೇ ಸ್ಥಾನ ಗಳಿಸಿದ್ದರು.
19ರ ಹರೆಯದ ಶೈಲಿ ಅವರಿಗೆ ಸೀನಿಯರ್ ಹಂತದಲ್ಲಿ ಇದು ಮೊದಲ ಪ್ರಮುಖ ಕೂಟವಾಗಿದ್ದು, 2021ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಇಲ್ಲಿ ಮೊದಲ ಸುತ್ತಿನಲ್ಲೇ 6.54 ಮೀ. ದೂರ ಜಿಗಿದರು. ಕೊನೆಯ ಯತ್ನದಲ್ಲಿ 6.97 ಮೀ. ಜಿಗಿದ ಜಪಾನ್‌ನ ಸುಮಿರೆ ಹತಾ ಚಿನ್ನದ ಪದಕ ಗೆದ್ದರು. ಕಂಚಿನ ಪದಕ ಚೀನಾದ ಝಾಂಗ್ ಜಿಯಾವಿ (6.46 ಮೀ.) ಪಾಲಾಯಿತು. ಕಳೆದ ತಿಂಗಳ ಅಂತರರಾಜ್ಯ ಕೂಟದಲ್ಲಿ ಶೈಲಿ ಅವರನ್ನು ಹಿಂದಕ್ಕೆ ಹಾಕಿ ಚಿನ್ನ ಗೆದ್ದಿದ್ದ ಆನ್ಸಿ ಸೋಜನ್ (6.41 ಮೀ) ಇಲ್ಲಿ ನಾಲ್ಕನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.