ADVERTISEMENT

ಏಷ್ಯನ್ ಅಥ್ಲೆಟಿಕ್ಸ್: 24 ಪದಕ ಗೆದ್ದ ಭಾರತ

ಪಾರುಲ್, ಸಚಿನ್‌, ಅನಿಮೇಶ್‌ಗೆ ಬೆಳ್ಳಿ

ಪಿಟಿಐ
Published 31 ಮೇ 2025, 16:40 IST
Last Updated 31 ಮೇ 2025, 16:40 IST
<div class="paragraphs"><p>ಭಾರತದ ಪಾರುಲ್ ಚೌಧರಿ</p></div>

ಭಾರತದ ಪಾರುಲ್ ಚೌಧರಿ

   

  –ಪಿಟಿಐ ಸಂಗ್ರಹ ಚಿತ್ರ

ಗುಮಿ, ದಕ್ಷಿಣ ಕೊರಿಯಾ: ಭಾರತದ ಅಥ್ಲೀಟ್‌ಗಳು ಇಲ್ಲಿ ನಡೆಯುತ್ತಿರುವ 26ನೇ ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಒಟ್ಟು 24 ಪದಕಗಳನ್ನು ಜಯಿಸಿ ಅಭಿಯಾನ ಮುಗಿಸಿದರು. ಕೂಟದ ಅಂತಿಮ ದಿನವಾದ ಶನಿವಾರ ಭಾರತ ಅಥ್ಲೀಟ್‌ಗಳು ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಕೊರಳಿಗೇರಿಸಿಕೊಂಡರು. 

ADVERTISEMENT

ಈ ಕೂಟದಲ್ಲಿ ಭಾರತವು ಒಟ್ಟು 8 ಚಿನ್ನ, 10 ಬೆಳ್ಳಿ ಮತ್ತು 6 ಕಂಚಿನ ಪದಕ ಗಳಿಸಿತು. ಹೋದ ಸಲ ಭಾರತ ತಂಡವು 6 ಚಿನ್ನ ಗೆದ್ದಿತ್ತು. ಈ ಬಾರಿ ಎರಡು ಹೆಚ್ಚು ಬಂಗಾರ ಪದಕಗಳು ಒಲಿದಿವೆ. ಆದರೆ ಒಟ್ಟು ಪದಕಗಳಿಕೆಯು ಹೋದ ಸಲಕ್ಕಿಂತ (27) ಕಡಿಮೆಯಾಗಿದೆ. 

ಪಾರುಲ್ ಚೌಧರಿ ಅವರು ಈ ಕೂಟದಲ್ಲಿ ತಮ್ಮ ಎರಡನೇ ಪದಕ ಸಾಧನೆ ಮಾಡಿದರು. ಅವರು ಮಹಿಳೆಯರ 5000 ಮೀಟರ್ಸ್ ಓಟದಲ್ಲಿ 15ನಿಮಿಷ, 15.33 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಎರಡನೇ ಸ್ಥಾನ ಪಡೆದರು. ಅವರು ಇದೇ ಕೂಟದಲ್ಲಿ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. 

ಜಾವೆಲಿನ್ ಥ್ರೋನಲ್ಲಿ ಸಚಿನ್ ಯಾದವ್ ಕೂಡ ಬೆಳ್ಳಿ ಪದಕ ಗೆದ್ದರು. ಒಲಿಂಪಿಯನ್ ನೀರಜ್ ಚೋಪ್ರಾ ಅವರ ಅನುಪಸ್ಥಿತಿಯಲ್ಲಿ ಮಿಂಚಿದ ಸಚಿನ್ 85.16 ಮೀಟರ್ಸ್ ದೂರ ಜಾವೆಲಿನ್ ಎಸೆದರು. ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ಅರ್ಷದ್ ನದೀಮ್ ಅವರು 86.40ಮೀ ದೂರ ಭರ್ಜಿ ಎಸೆದು ಚಿನ್ನದ ಪದಕ ಗಳಿಸಿದರು. ಪ್ಯಾರಿಸ್ ಒಲಿಂಪಿಕ್ ಕೂಟದ ನಂತರ ಅವರು ಭಾಗವಹಿಸಿದ ಮೊದಲ ಸ್ಪರ್ಧೆ ಇದಾಗಿದೆ.

ಸಚಿನ್ ಅವರು ಉತ್ತರಪ್ರದೇಶದ ಖೆಕ್ರಾ ಗ್ರಾಮದ ಕೃಷಿ ಕುಟುಂಬದವರು. 25 ವರ್ಷದ ಸಚಿನ್ ಅವರು ಈ ಹಿಂದೆ 84.39 ಮೀಟರ್ಸ್ ಥ್ರೋ ಸಾಧನೆ ಮಾಡಿದ್ದರು.ಇದೇ ವಿಭಾಗದಲ್ಲಿ ಭಾರತದ ಯಶ್‌ವೀರ್ ಸಿಂಗ್‌ ಅವರು 82.57 ಮೀಟರ್ಸ್ ಎಸೆದು ಐದನೇ ಸ್ಥಾನ ಪಡೆದರು. 

ಪುರುಷರ 200 ಮೀಟರ್ಸ್ ಓಟದಲ್ಲಿ ಅನಿಮೇಶ್ ಕುಜುರ್ 20.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಪಡೆದರು. ಅಲ್ಲದೇ ರಾಷ್ಟ್ರೀಯ ದಾಖಲೆಯನ್ನೂ ಬರೆದರು. ಕೊನೆಯ ದಿನ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.

2015ರ ಕೂಟದಲ್ಲಿ ಧರಮ್‌ವೀರ್ ಸಿಂಗ್ ಅವರು ಕಂಚು ಗೆದ್ದಿದ್ದರು. ಅದರ ನಂತರ ಭಾರತಕ್ಕೆ ಒಲಿದ ಪದಕ ಇದಾಗಿದೆ. ಒಡಿಶಾದ 21 ವರ್ಷದ ಅನಿಮೇಶ್ ಈಚೆಗಷ್ಟೇ ರಾಷ್ಟ್ರೀಯ ಫೆಡರೇಷನ್ ಅಥ್ಲೆಟಿಕ್ಸ್‌ನಲ್ಲಿ 20.40 ಸೆಕೆಂಡುಗಳ ದಾಖಲೆ ಮಾಡಿದ್ದರು. ಇದೀಗ ಅದನ್ನು ಮೀರಿದ್ದಾರೆ. ಕೂಟದಲ್ಲಿ ಜಪಾನಿನ ಟೊವಾ ಉಜಾವಾ 20.12 ಸೆಕೆಂಡುಗಳಲ್ಲಿ ಚಿನ್ನ ಗೆದ್ದರು. ಅರೇಬಿಯಾದ ಅಬ್ದುಲ್‌ಅಜೀಜ್ ಅಬ್ದು ಐ ಅಟಾಫಿ (20.31ಸೆ) ಬೆಳ್ಳಿ ಪಡೆದರು. 

ಮಹಿಳೆಯರ 4X100 ಮೀಟರ್ಸ್ ರಿಲೆ ತಂಡ ಕೂಡ ರಜತ ಪದಕ ಗೆದ್ದಿತು. ಅಭಿನಯಾ ರಾಜರಾಜನ್, ಎಸ್‌.ಎಸ್. ಸ್ನೇಹಾ, ಶ್ರಬನಿ ನಂದಾ ಮತ್ತು ನಿತ್ಯಾ ಗಂಧೆ ಅವರಿದ್ದ ತಂಡವು 43.86 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. 

ಮಧ್ಯಮ ಅಂತರದ ಓಟಗಾರ್ತಿ ಪೂಜಾ ಅವರು ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಕಂಚು ಗಳಿಸಿದರು. 400 ಮೀ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್ ಕಂಚು ಪಡೆದರು.

ಜ್ಯೋತಿ ಯರ‍್ರಾಜಿ ಅವರು 200 ಮೀ ಓಟದ ಫೈನಲ್‌ನಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಅವರು 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.