ADVERTISEMENT

ಸಾಮರ್ಥ್ಯ ಅಳೆಯಲು ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಉತ್ತಮ ವೇದಿಕೆ

ಭಾರತ ಹಾಕಿ ತಂಡದ ಮಿಡ್‌ಫೀಲ್ಡರ್‌ ಸುಮಿತ್‌ ಅಭಿಪ್ರಾಯ

ಪಿಟಿಐ
Published 9 ನವೆಂಬರ್ 2020, 13:20 IST
Last Updated 9 ನವೆಂಬರ್ 2020, 13:20 IST
ಬೆಲ್ಜಿಯಂ ವಿರುದ್ಧದ ಪಂದ್ಯವೊಂದರಲ್ಲಿ ಸುಮಿತ್ (ನೀಲಿ ಪೋಷಾಕು)–ಎಎಫ್‌ಪಿ ಚಿತ್ರ
ಬೆಲ್ಜಿಯಂ ವಿರುದ್ಧದ ಪಂದ್ಯವೊಂದರಲ್ಲಿ ಸುಮಿತ್ (ನೀಲಿ ಪೋಷಾಕು)–ಎಎಫ್‌ಪಿ ಚಿತ್ರ   

ಬೆಂಗಳೂರು: ‘ಮುಂದಿನ ವರ್ಷ ನಡೆಯಲಿರುವ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಮ್ಮ ಸಾಮರ್ಥ್ಯ ಅಳೆಯುವ ಉತ್ತಮ ವೇದಿಕೆಯಾಗಲಿದೆ‘ ಎಂದು ಭಾರತ ಹಾಕಿ ತಂಡದ ಮಿಡ್‌ಫೀಲ್ಡರ್ ಸುಮಿತ್‌ ಹೇಳಿದ್ದಾರೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ಪರ್ಧಾತ್ಮಕ ಹಾಕಿ ಚಟುವಟಿಕೆಗಳನ್ನು ಭಾರತ ತಂಡವು ಢಾಕಾದಲ್ಲಿ ಮಾರ್ಚ್‌ನಲ್ಲಿ ನಿಗದಿಯಾಗಿರುವ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಮೂಲಕ ಪುನರಾರಂಭಿಸಲಿದೆ.

‘ನಮ್ಮ ಕೌಶಲಗಳಿಗೆ ಸಾಣೆ ಹಿಡಿಯಲು ತರಬೇತಿಯು ಪುನರಾರಂಭಗೊಂಡಿದ್ದು ಅದೃಷ್ಟ. ಟೋಕಿಯೊ ಒಲಿಂಪಿಕ್ಸ್ ಮುಂದಿರುವಂತೆ, ನಮ್ಮ ಸಾಮರ್ಥ್ಯದ ಮಟ್ಟವನ್ನು ಅಳೆಯಲು ಚಾಂಪಿಯನ್ಸ್ ಟ್ರೋಫಿ ಉತ್ತಮ ವೇದಿಕೆಯಾಗಲಿದೆ. ಇದರಿಂದ ಪ್ರದರ್ಶನವನ್ನು ಸುಧಾರಿಸಿಕೊಳ್ಳಲೂ ಅನುಕೂಲವಾಗಲಿದೆ‘ ಎಂದು ಸುಮಿತ್‌ ಹೇಳಿದರು.

ADVERTISEMENT

ಸುಮಿತ್‌ ಅವರು ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ತಂಡದಲ್ಲಿ ಇದ್ದಾರೆ.

ಶಿಬಿರದ ಕುರಿತು ಮಾತನಾಡಿದ ಅವರು ‘ಕೋವಿಡ್‌ ಕಾರಣದಿಂದ ನಾವು ಈ ವರ್ಷ ಯಾವುದೇ ಪಂದ್ಯದಲ್ಲಿ ಆಡದಿದ್ದರೂ, ಶಿಬಿರದಲ್ಲಿ ನಮ್ಮ ನಮ್ಮಲ್ಲೇ ಪಂದ್ಯಗಳನ್ನು ನಡೆಸಿ ಸಾಮರ್ಥ್ಯ ಪರೀಕ್ಷಿಸಿಕೊಂಡಿದ್ದೇವೆ‘ ಎಂದರು.

2016ರಲ್ಲಿ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ಸುಮಿತ್‌ ಇದ್ದರು. ಮಣಿಕಟ್ಟಿನ ಗಾಯದ ಕಾರಣ ಕಳೆದ ವರ್ಷ ಕೆಲವು ಪ್ರಮುಖ ಟೂರ್ನಿಗಳಲ್ಲಿ ಅವರು ಆಡಿರಲಿಲ್ಲ.

‘ಸದ್ಯ ತರಬೇತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಏಷ್ಯನ್‌ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ವಿಶ್ವಾಸವಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ‘ ಎಂದು ಸುಮಿತ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.