ADVERTISEMENT

ಏಷ್ಯಾಡ್‌: ಅಥ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಭಾರತಕ್ಕೆ ಚಿನ್ನದ ರಂಗು

ಕರ್ನಾಟಕದ ಪೂವಮ್ಮ ಒಳಗೊಂಡ ಮಹಿಳೆಯರ ತಂಡದ ಸಾಧನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 20:18 IST
Last Updated 30 ಆಗಸ್ಟ್ 2018, 20:18 IST
ಮಹಿಳಾ ರಿಲೆ ತಂಡದಲ್ಲಿದ್ದ ಸರೀತಾ ಗಾಯಕ್‌ವಾಡ್‌, ಹಿಮಾ ದಾಸ್‌, ವಿಸ್ಮಯಾ ಮತ್ತು ಪೂವಮ್ಮರ ಸಂಭ್ರಮದ ಪರಿ.
ಮಹಿಳಾ ರಿಲೆ ತಂಡದಲ್ಲಿದ್ದ ಸರೀತಾ ಗಾಯಕ್‌ವಾಡ್‌, ಹಿಮಾ ದಾಸ್‌, ವಿಸ್ಮಯಾ ಮತ್ತು ಪೂವಮ್ಮರ ಸಂಭ್ರಮದ ಪರಿ.   

ಜಕಾರ್ತ: ಭಾರತದ ಮಹಿಳಾ ರಿಲೆ ತಂಡದವರು ಏಷ್ಯನ್‌ ಕ್ರೀಡಾಕೂಟದಲ್ಲಿ ಪಾರಮ್ಯ ಮುಂದುವರಿಸಿದರು. ಕರ್ನಾಟಕದ ಎಂ.ಆರ್‌.ಪೂವಮ್ಮ ಅವರನ್ನು ಒಳಗೊಂಡ 4x400 ಮೀಟರ್ಸ್ ರಿಲೆ ತಂಡ ಗುರುವಾರ ಸಂಜೆ ಚಿನ್ನದ ಸಾಧನೆ ಮಾಡಿತು. ಈ ಮೂಲಕ ನಿರಂತರ ಐದನೇ ಮೊದಲಿಗರಾದ ಅಪರೂಪದ ಸಾಧನೆ ಮಾಡಿತು.

ಪುರುಷರ 1500 ಮೀಟರ್ಸ್ ಓಟದಲ್ಲಿ ಜಿನ್ಸನ್ ಜಾನ್ಸನ್‌ ಮಿಂಚಿನ ಓಟ ಓಡಿ ಚಿನ್ನಕ್ಕೆ ಮುತ್ತಿಕ್ಕಿದರು. 4x400 ಮೀಟರ್ಸ್ ರಿಲೆ ತಂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಮಹಿಳೆಯರ 1500 ಮೀಟರ್ಸ್ ಓಟದಲ್ಲಿ ಪಿ.ಯು.ಚಿತ್ರಾ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸೀಮಾ ಪೂನಿಯಾ ಅವರಿಗೆ ಮಹಿಳೆಯರ ಡಿಸ್ಕಸ್ ಥ್ರೋದಲ್ಲಿ ಚಿನ್ನ ಗೆಲ್ಲಲು ಆಗಲಿಲ್ಲ. ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ ರಿಲೆಯಲ್ಲಿ ಹಿಮಾ ದಾಸ್ ಮೊದಲ ಲ್ಯಾಪ್‌ ಓಡಿ ಮುನ್ನಡೆ ಗಳಿಸಿಕೊಟ್ಟರು. ನಂತರದ ಮೂರೂ ಲ್ಯಾಪ್‌ಗಳಲ್ಲಿ ಈ ಮುನ್ನಡೆಯನ್ನು ಉಳಿಸಿಕೊಂಡ ತಂಡ ಪ್ರತಿಸ್ಪರ್ಧಿಗಳನ್ನು ನಿರಾಯಾಸವಾಗಿ ಹಿಂದಿಕ್ಕಿತು.

ADVERTISEMENT

ಎರಡನೇ ಲ್ಯಾಪ್‌ನಲ್ಲಿ ಪೂವಮ್ಮ ಮತ್ತು ಮೂರನೇ ಲ್ಯಾಪ್‌ನಲ್ಲಿ ಸರಿತಾಬೆನ್ ಗಾಯಕವಾಡ್‌ ಅಮೋಘ ಸಾಮರ್ಥ್ಯ ತೋರಿದರು. ಗಾಯಕವಾಡ್ ಅವರಿಂದ ಬ್ಯಾಟನ್ ಪಡೆದುಕೊಂಡು ಮುನ್ನುಗ್ಗಿದ ವಿ.ಕೆ.ವಿಸ್ಮಯ ಎರಡು ಸೆಕೆಂಡುಗಳ ಅಂತರದಲ್ಲಿ ಬಹರೇನ್‌ನ ಅಥ್ಲೀಟ್‌ಗಳನ್ನು ಹಿಂದಿಕ್ಕಿದರು. ವಿಯೆಟ್ನಾಂ ತಂಡ ಕಂಚು ಗಳಿಸಿತು.

ಜಿನ್ಸನ್‌ಗೆ ಚಿನ್ನದ ಸವಿ:800 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ಜಿನ್ಸನ್ ಜಾನ್ಸನ್‌ ಗುರುವಾರ ಸಂಜೆ ಮತ್ತೊಮ್ಮೆ ಮಿಂಚಿನ ಸಾಮರ್ಥ್ಯ ತೋರಿದರು. ಇರಾನ್‌ನ ಅಮೀರ್ ಮೊರಡಿ ಅವರನ್ನು ಭಾರಿ ಅಂತರದಲ್ಲಿ ಹಿಂದಿಕ್ಕಿದ ಅವರು ಚಿನ್ನದ ನಗೆ ಬೀರಿದರು. 800 ಮೀಟರ್ಸ್ ಓಟದಲ್ಲಿ ಜಿನ್ಸನ್ ಅವರನ್ನು ಹಿಂದಿಕ್ಕಿದ್ದ ಮಂಜೀತ್ ಸಿಂಗ್ ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಬಹರೇನ್‌ನ ಮೊಹಮ್ಮದ್ ತಿವಾಲಿ ಕಂಚು ಗೆದ್ದರು.

ಜಿನ್ಸನ್ ಜಾನ್ಸನ್‌

ಪುರುಷರ 4x400 ಮೀಟರ್ಸ್ ರಿಲೆಯಲ್ಲಿ ಭಾರತ ತಂಡ ಬೆಳ್ಳಿಯ ಸಾಧನೆ ಮಾಡಿತು. ಕುಂಞು ಮೊಹಮ್ಮದ್ ಗಳಿಸಿಕೊಟ್ಟ ಮುನ್ನಡೆಯನ್ನು ಉಳಿಸಿಕೊಂಡ ಧರುಣ್‌ ಅಯ್ಯಸಾಮಿ, ಮೊಹಮ್ಮದ್ ಅನಾಸ್ ಮತ್ತು ಆರೋಕ್ಯ ರಾಜೀವ್‌ ಜಪಾನ್‌ ತಂಡವನ್ನು ಹಿಂದಿಕ್ಕಿತು. ಚಿನ್ನದ ಪದಕ ಖತಾರ್ ಪಾಲಾಯಿತು. ಕಳೆದ ಬಾರಿ ಭಾರತ ತಂಡ ನಾಲ್ಕನೇ ಸ್ಥಾನ ಗಳಿಸಿತ್ತು.
**

ಕಂಚು ಗೆದ್ದ ಚಿತ್ರಾ, ಸೀಮಾ ಪೂನಿಯಾ
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಭಾರತದ ಅಥ್ಲೀಟ್‌ಗಳ ತಂಡದಲ್ಲಿ ತಮ್ಮನ್ನು ಸೇರಿಸದೇ ಇದ್ದುದಕ್ಕೆ ಆರೋಪಗಳ ಮಳೆಗೈದಿದ್ದ ಪಿ.ಯು.ಚಿತ್ರಾ ಏಷ್ಯನ್ ಕ್ರೀಡಾಕೂಟದಲ್ಲಿ ಮಿಂಚಿದರು.

ಮಹಿಳೆಯರ 1500 ಮೀಟರ್ಸ್ ಓಟದಲ್ಲಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಬಹರೇನ್‌ನ ಬೆಲ್ಕಡು ಕಲ್ಕಿಡನ್ ಮತ್ತು ಬಿಲೇ ಟಿಜಿಸ್ಟ್ ಅವರಿಗೆ ಭಾರಿ ಸವಾಲೊಡ್ಡಿದ ಚಿತ್ರಾ ಕೊನೆಗೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಲ್ಕಿಡನ್ ಚಿನ್ನ ಮತ್ತು ಟಿಜಿಸ್ಟ್ ಬೆಳ್ಳಿ ಗೆದ್ದರು.

ಪಿ.ಯು.ಚಿತ್ರಾ

ಸೀಮಾ ಪೂನಿಯಾ ಅವರು ಮಹಿಳೆಯರ ಡಿಸ್ಕಸ್ ಥ್ರೋದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಅವರಿಗೆ ಚೀನಾದ ಚೆನ್‌ ಯಾಂಗ್ ಮತ್ತು ಫೆಂಗ್ ಬಿನ್‌ ಪ್ರಬಲ ಪೈಪೋಟಿ ಒಡ್ಡಿದರು. ಕೊನೆಗೆ ಯಾಂಗ್ ಚಿನ್ನ ಗೆದ್ದರೆ ಫೆಂಗ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಸೀಮಾ ಪೂನಿಯಾ

***


**
ಶುಕ್ರವಾರದ ಸ್ಪರ್ಧೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.