ADVERTISEMENT

ಅಥ್ಲೆಟಿಕ್‌ ಫೆಡರೇಷನ್‌ ನೂತನ ಅಧ್ಯಕ್ಷರಾಗಿ ಬಹಾದೂರ್‌ ಸಿಂಗ್

ಸುಮರಿವಾಲಾ ಸ್ಥಾನಕ್ಕೆ ಬಹಾದೂರ್ ಸಾಗೂ

ಪಿಟಿಐ
Published 6 ಜನವರಿ 2025, 13:42 IST
Last Updated 6 ಜನವರಿ 2025, 13:42 IST

ಚಂಡೀಗಢ: ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತ ಶಾಟ್‌ಪಟ್‌ ಥ್ರೋ ಪಟು ಬಹಾದೂರ್‌ ಸಿಂಗ್ ಸಾಗೂ ಅವರು ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಮಂಗಳವಾರ ಫೆಡರೇಷನ್‌ನ ಸರ್ವಸದಸ್ಯರ ಸಭೆ ನಿಗದಿಯಾಗಿದೆ.

ದೀರ್ಘಾವಧಿಗೆ ಅಧ್ಯಕ್ಷರಾಗಿದ್ದ ಅದಿಲ್ ಸುಮರಿವಾಲಾ ಅವರ ಸ್ಥಾನವನ್ನು ಬಹಾದೂರ್ ತುಂಬಲಿದ್ದಾರೆ. 2002ರ ಬೂಸಾನ್ ಏಷ್ಯನ್ ಕ್ರೀಡೆಗಳಲ್ಲಿ ಸ್ವರ್ಣ ಪದಕ ಗೆದ್ದಿದ್ದ ಸಾಗೂ ಸಿಡ್ನಿ (2000) ಮತ್ತು ಅಥೆನ್ಸ್ (2004) ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 51 ವರ್ಷ ವಯಸ್ಸಿನ ಸಾಗೂ ಅವರು ಅಥ್ಲೆಟಿಕ್‌ ಕಮಿಷನ್‌ನ ಪ್ರತಿನಿಧಿಯಾಗಿ ನಿರ್ಗಮಿತ ಕಾರ್ಯಕಾರಿ ಸಮಿತಿಯಲ್ಲಿದ್ದರು. ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ.

ಅವರು ಸೀನಿಯರ್ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದಾರೆ. ಹಾಲಿ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಅವರು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹಿಂದೆಸರಿದ ಬಳಿಕ ಸಾಗೂ ಅವರೊಬ್ಬರೇ ಕಣದಲ್ಲಿ ಉಳಿದಿದ್ದಾರೆ. ಅಂಜು ಬಾಬಿ ಅವರು ಎರಡನೇ ಅವಧಿಗೆ ಹಿರಿಯ ಉಪಾಧ್ಯಕ್ಷೆಆಗಿ ಮುಂದುವರಿಯಲಿದ್ದಾರೆ.

ADVERTISEMENT

ನೂತನವಾಗಿ ಆಯ್ಕೆಯಾದವವರು ನಾಲ್ಕು ವರ್ಷ ಅವಧಿ ಹೊಂದಿದ್ದಾರೆ. ದೆಹಲಿ ಘಟಕದ ಉನ್ನತ ಅಧಿಕಾರಿ ಸಂದೀಪ್ ಮೆಹ್ತಾ ಅವರು ಎಎಫ್‌ಐ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

1998ರ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಸ್ವರ್ಣ ಜಯಿಸಿದ್ದ ಜ್ಯೋತಿರ್ಮಯಿ ಸಿಕ್ದರ್ ಅವರು ಜಂಟಿ ಕಾರ್ಯದರ್ಶಿ ಆಗಿ, ತೆಲಂಗಾಣದ ಸ್ಟಾನ್ಲಿ ಜೋನ್ಸ್ ಅವರು ಖಜಾಂಚಿಯಾಗಿ ಆಯ್ಕೆ ಆಗಲಿದ್ದಾರೆ.

67 ವರ್ಷ ವಯಸ್ಸಿನ ಸುಮರಿವಾಲಾ ಅವರು 2012 ರಿಂದ ಅಧ್ಯಕ್ಷರಾಗಿದ್ದು, ಹೊಸ ಕ್ರೀಡಾ ಸಂಹಿತೆ ಅನುಸಾರ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸುವಂತಿಲ್ಲ. ಅವರು ವರ್ಲ್ಡ್ ಅಥ್ಲೆಟಿಕ್ಸ್ ಕಾರ್ಯಕಾರಿ ಮಂಡಳಿ ಹಾಲಿ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.