ADVERTISEMENT

ಏಷ್ಯನ್ ಯುವ ಬಾಕ್ಸಿಂಗ್‌: ಭಾರತದ ವನಿತೆಯರಿಗೆ 7 ಪದಕ ಖಚಿತ

ಏಷ್ಯನ್ ಯುವ ಬಾಕ್ಸಿಂಗ್‌

ಪಿಟಿಐ
Published 5 ಆಗಸ್ಟ್ 2025, 16:22 IST
Last Updated 5 ಆಗಸ್ಟ್ 2025, 16:22 IST
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ   

ಬ್ಯಾಂಕಾಕ್‌: ಭಾರತದ ಬಾಕ್ಸರ್‌ಗಳು, 19 ಮತ್ತು 22 ವರ್ಷದೊಳಗಿನವರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಸಹ ಉತ್ತಮ ಸಾಧನೆ ತೋರಿದ್ದು, ಏಳು ಮಂದಿ ಮಹಿಳಾ ಬಾಕ್ಸರ್‌ಗಳು ಪದಕ ಗೆಲ್ಲುವುದು ಖಚಿತವಾಗಿದೆ.

19 ವರ್ಷದೊಳಗಿನವರ ವಿಭಾಗದಲ್ಲಿ ಯಶಿಕಾ (51 ಕೆ.ಜಿ), ನಿಶಾ (54 ಕೆ.ಜಿ), ಮುಷ್ಕಾನ್ (57 ಕೆ.ಜಿ), ನಿನಿ (60 ಕೆ.ಜಿ), ನಿಶಾ (65 ಕೆ.ಜಿ), ಅಕಾನ್ಶಾ ಫಲಸ್ವಾಲ್‌ (70 ಕೆ.ಜಿ) ಮತ್ತು ಆರತಿ ಕುಮಾರಿ (75 ಕೆ.ಜಿ) ಅವರು ತಮ್ಮ ತೂಕ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದ್ದಾರೆ.

22 ವರ್ಷದೊಳಗಿನವರ ವಿಭಾಗದಲ್ಲಿ ಭಾರತಕ್ಕೆ ಒಂದು ಡಜನ್‌ಗೂ ಹೆಚ್ಚು ಪದಕ ಖಚಿತವಾಗಿದೆ. ತಂಡವು ಇವುಗಳಲ್ಲಿ ಸಾಧ್ಯವಾದಷ್ಟು ಚಿನ್ನ ಗೆಲ್ಲುವ ವಿಶ್ವಾಸದೊಡನೆ ಕಣಕ್ಕಿಳಿಯಲಿದೆ.

ADVERTISEMENT

ಯಶಿಕಾ 51 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ 3:2 ವಿಭಜಿತ ತೀರ್ಪಿನಲ್ಲಿ ಉಜ್ಬೇಕಿಸ್ತಾನದ ಮುಖ್ತಾಸರ್ ಅಲಿಯೇವಾ ಅವರನ್ನು ಮಣಿಸಿದರು. ನಿಶಾ ತಮ್ಮ ತೂಕ ವಿಭಾಗದ ಪಂದ್ಯದಲ್ಲಿ ಕಿರ್ಗಿಸ್ತಾನದ ಮಿಲನಾ ಶಿಕ್ಷಾಬೆಕೋವಾ ಅವರನ್ನು ಆರ್‌ಎಫ್‌ಸಿ (ರೆಫ್ರಿ ಸ್ಟಾಪ್ಸ್‌ ಕಂಟೆಸ್ಟ್‌) ಆಧಾರದಲ್ಲಿ ಮಣಿಸಿದರು.

ಮುಸ್ಕಾನ್‌ 57 ಕೆ.ಜಿ ವಿಭಾಗದಲ್ಲಿ ಉಜ್ಬೇಕಿಸ್ತಾನ ರಬಿಯಾ ರೆವಶನೋವಾ ಅವರನ್ನು ‘ಸರ್ವಾನುಮತದ ತೀರ್ಪಿ’ನಲ್ಲಿ ಮಣಿಸಿದರು. ವಿನಿ, ಸತತ ಪಂಚ್‌ಗಳಿಂದ ಕಿರ್ಗಿಸ್ತಾನದ ಅಡೇಲಿಯಾ ಅಸಿಲ್ಬೆಕ್‌ ಅವರನ್ನು ಆರ್‌ಎಫ್‌ಸಿ ತೀರ್ಪಿನಲ್ಲಿ ಸೋಲಿಸಿದರು.

ನಿಶಾ 65 ಕೆ.ಜಿ. ವಿಭಾಗದ ಸೆಣಸಾಟದಲ್ಲಿ ಚೀನಾ ತೈಪೆಯ ಯು ಎನ್‌ಲಿ ಅವರ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಅಕಾನ್ಶಾ, 70 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಮಂಗೋಲಿಯಾದ ಎನ್ಕಾಜೆರೆಲ್ ಜೆರೆಲ್‌ಮುಂಕ್‌ ಅವರನ್ನು ಮಣಿಸಿದರು. ಆರತಿ, ಕಜಕಸ್ತಾನದ ಝರಿನಾ ಟೊಲಿಬೈ ಅವರನ್ನು ಸೋಲಿಸಿದರು.

ಭಾರತದ ಸಹನಾ ಕುಮಾರಿ ಮಾತ್ರ ನಿರಾಶೆ ಅನುಭವಿಸಿದರು. ತೀವ್ರ ಸೆಣಸಾಟದ ನಂತರ ಅವರು 2:3 ರಲ್ಲಿ ಉಜ್ಬೇಕಿಸ್ತಾನದ ಮುಫ್ತುನಾ ಮುಸುರಮನೋವಾ ಎದುರು ಸೋಲನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.