ADVERTISEMENT

ಓಟ ಪ್ರಿಯೆ ಪ್ರಿಯಾ ಮೋಹನ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಗೆದ್ದ ಪದಕಗಳೊಂದಿಗೆ ಪ್ರಿಯಾ ಮೋಹನ್ –ಪ್ರಜಾವಾಣಿ ಚಿತ್ರ
ಗೆದ್ದ ಪದಕಗಳೊಂದಿಗೆ ಪ್ರಿಯಾ ಮೋಹನ್ –ಪ್ರಜಾವಾಣಿ ಚಿತ್ರ   

ಕಳೆದ ವರ್ಷ ಅಕ್ಟೋಬರ್ ವರೆಗೆ ಸ್ಪೈಕ್ಸ್ ಧರಿಸಿ ಓಡುವುದು ಹೇಗೆ ಎಂದೇ ತಿಳಿಯದಿದ್ದ ಓಟಗಾರ್ತಿ ಈಗ ರಾಜ್ಯದ ಪ್ರಮುಖ ಸ್ಪ್ರಿಂಟರ್ ಆಗುವತ್ತ ದಾಪುಗಾಲು ಇಡುತ್ತಿದ್ದಾರೆ. ಟ್ರ್ಯಾಕ್‌ನಲ್ಲಿ ಸಾಧನೆ ಮಾಡಬೇಕು ಎಂಬ ಅದಮ್ಯ ಬಯಕೆಯಿಂದ ‘ಓಟ’ ಶುರು ಮಾಡಿದ ಈ ಅಥ್ಲೀಟ್ ಒಂದೇ ವರ್ಷದ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ಪ್ರಿಯಾ ಮೋಹನ್.

ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ ಅವರು ಗುಂಟೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 18 ವರ್ಷದೊಳಗಿನವರ 200 ಮೀಟರ್ಸ್ ಓಟ (24.49 ಸೆಕೆಂಡು), 400 ಮೀಟರ್ಸ್ ಓಟ (55.27 ಸೆ) ಮತ್ತು ರಿಲೇಯಲ್ಲಿ ಮೊದಲಿಗರಾಗಿ ಮಿಂಚಿದ್ದಾರೆ.

ಕಳೆದ ವರ್ಷ ನಡೆದಿದ್ದ ಐಸಿಎಸ್‌ಇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೋಚ್ ಅರ್ಜುನ್ ಅಜಯ್ ಅವರನ್ನು ಭೇಟಿಯಾಗಲು ದೊರಕಿದ ಅವಕಾಶ ಪ್ರಿಯಾ ಅವರ ಅಥ್ಲೆಟಿಕ್ ಬದುಕಿಗೆ ಹೊಸ ದಿಸೆ ತೋರಿಸಿತು. ‘ಸ್ಪ್ರಿಂಟರ್‌ಗೆ ಬೇಕಾದ ಎತ್ತರ ಪ್ರಿಯಾಗೆ ಇತ್ತು. ಆದರೆ ಓಟದ ಶೈಲಿ ಚೆನ್ನಾಗಿರಲಿಲ್ಲ. ಇದನ್ನು ಸರಿಪಡಿಸಲು ಯೋಗ ನೆರವಾಯಿತು. ನಂತರ ದೇಹಕ್ಕೆ ಬಲ ತುಂಬಲು ಬೇಕಾದ ವ್ಯಾಯಾಮಗಳನ್ನು ಮಾಡಿಸಿದೆ. ಎಲ್ಲದಕ್ಕೂ ಬೇಗ ಒಗ್ಗಿಕೊಂಡ ಕಾರಣ ಅವರನ್ನು ಅಥ್ಲೀಟ್ ಆಗಿ ಬೆಳೆಸುವ ಕಾರ್ಯ ಕಠಿಣವಾಗಲಿಲ್ಲ’ ಎಂದು ಅರ್ಜುನ್ ವಿವರಿಸುತ್ತಾರೆ.

ADVERTISEMENT
ಪ್ರಿಯಾ ಮೋಹನ್

ಅರ್ಜುನ್ ಅವರ ಬಳಿ ಅಭ್ಯಾಸ ಮಾಡಿದ ನಂತರದ ಮೊದಲ ಕ್ರೀಡಾಕೂಟದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಪ್ರಿಯಾಗೆ ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಷನ್‌ನ ಕೂಟದ 400 ಮೀಟರ್ಸ್ ಓಟದಲ್ಲಿ 5ನೇ ಸ್ಥಾನ ಗಳಿಸಿ ನಿರಾಸೆಗೆ ಒಳಗಾಗಿದ್ದರು. ಆದರೆ ಛಲ ಬಡಲಿಲ್ಲ. ಕಠಿಣ ಪರಿಶ್ರಮಕ್ಕೆ ಚಿನ್ನದ ಪದಕ ಒಲಿಯಿತು. ಜೂನಿಯರ್ ಫೆಡರೇಷನ್ ಕಪ್‌ನಲ್ಲಿ ಅವರ ಮೇಲೆ ಪದಕಗಳ ಮಳೆ ಸುರಿಯಿತು. 200 ಮೀಟರ್ಸ್ ಮತ್ತು 400 ಮೀಟರ್ಸ್ ಓಟದಲ್ಲಿ ಕ್ರಮವಾಗಿ 24.27 ಸೆಕೆಂಡು ಮತ್ತು 53.62 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ರಾಜ್ಯದ ದಾಖಲೆಗಳೂ ಅವರ ಹೆಸರಿಗೆ ಸೇರಿದವು.

ದಕ್ಷಿಣ ಏಷ್ಯಾ ಕ್ರೀಡಾಕೂಟದ 400 ಮೀಟರ್ಸ್‌ ಓಟದಲ್ಲಿ ಬೆಳ್ಳಿ ಗಳಿಸಿ ಮಿಂಚಿದರು.

ಯೂತ್ ಏಷ್ಯನ್ ಕೂಟದಲ್ಲೂ ಪ್ರಿಯಾ ಅವರಿಂದ ಉತ್ತಮ ಸಾಧನೆ ಮೂಡಿಬಂತು. 400 ಮೀಟರ್ಸ್‌ನಲ್ಲಿ 4ನೇ ಸ್ಥಾನ ಗಳಿಸಿದರೆ, ರಿಲೇಯಲ್ಲಿ ಬೆಳ್ಳಿ ಪದಕ ಲಭಿಸಿತು. ಲೋಕಾಯುಕ್ತ ನ್ಯಾಯಾಧೀಶ ಎಚ್‌.ಎ.ಮೋಹನ್ ಮತ್ತು ಚಂದ್ರಕಲಾ ದಂಪತಿಯ ಪುತ್ರಿಯಾಗಿರುವ ಪ್ರಿಯಾ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.