ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದಿರುವ ಟ್ರಿಪಲ್ ಜಂಪ್ ಸ್ಪರ್ಧಿ ಶೀನಾ ವರ್ಕಿ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ ಅಮಾನತು ಮಾಡಿದೆ. ಮಾದರಿ ಪರೀಕ್ಷೆಯಲ್ಲಿ ಅವರು ನಿಷೇಧಿತ ಮದ್ದು ಸೇವನೆ ಮಾಡಿದ್ದು ಖಚಿತಪಟ್ಟಿತ್ತು.
ದೇಶೀ ಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ 32 ವರ್ಷ ವಯಸ್ಸಿನ ಶೀನಾ, 2023ರ ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.
‘ಶೀನಾ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ವಿಶ್ವಾಸಾರ್ಹ ಮೂಲಗಳು ಪಿಟಿಐಗೆ ತಿಳಿಸಿವೆ. ಆದರೆ ಅವರು ಸೇವಿಸಿದ ನಿಷೇಧಿತ ಉದ್ದೀಪನ ಮದ್ದಿನ ವಿವರ ಬಹಿರಂಗಪಡಿಸಿಲ್ಲ.
ಕೇರಳದ ಈ ಅಥ್ಲೀಟ್ ಈ ವರ್ಷ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದರು. ಫೆಡರೇಷನ್ ಕಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. 2018ರಲ್ಲಿ ಏಷ್ಯನ್ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ದೇಶದಲ್ಲಿ ಕಳವಳಕಾರಿ ಪ್ರಮಾಣದಲ್ಲಿ ಮದ್ದುಸೇವನೆಯಾಗುತ್ತಿದೆ ಎಂಬ ವರದಿಗಳ ಮಧ್ಯೆಯೇ ಈಗ ಮತ್ತೊಂದು ‘ಪಾಸಿಟಿವ್’ ಪ್ರಕರಣ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.