ADVERTISEMENT

ಅಥ್ಲೆಟಿಕ್ ಕೋಚ್ ರವಿ ಅಣ್ಣಪ್ಪ ನಿಧನ

ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಬೆಳಕಿಗೆ ತಂದ ಅಥ್ಲೆಟಿಕ್ ಕೋಚ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 5:42 IST
Last Updated 12 ನವೆಂಬರ್ 2021, 5:42 IST
ರವಿ ಅಣ್ಣಪ್ಪ
ರವಿ ಅಣ್ಣಪ್ಪ   

ಬೆಂಗಳೂರು: ಕರ್ನಾಟಕದಲ್ಲಿ ಅನೇಕ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಬೆಳೆಸಿದ ಅಥ್ಲೆಟಿಕ್ ಕೋಚ್ ರವಿ ಅಣ್ಣಪ್ಪ (53) ಗುರುವಾರ ಮುಂಜಾನೆ ನಗರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಎಡವನಹಳ್ಳಿಯವರಾದ ರವಿ ಜನಿಸಿದ್ದು ತಾಯಿಯ ತವರು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ.

ಅಥ್ಲೀಟ್ ಆಗಿದ್ದ ರವಿ ಆರಂಭದಲ್ಲಿ ಮೂಡಬಿದಿರೆ ಆಳ್ವಾಸ್‌ನ ಏಕಲವ್ಯ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದರು. ರಾಷ್ಟ್ರಮಟ್ಟದಲ್ಲಿ 110 ಮೀಟರ್ಸ್ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೋಚ್ ಆಗಿ ನೇಮಕಗೊಂಡ ನಂತರ ಕೊಡಗು, ಬೆಂಗಳೂರಿನ ವಿದ್ಯಾನಗರ, ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನೀಡಿದ್ದಾರೆ.

ADVERTISEMENT

ಇಲಾಖೆಯನ್ನು ತೊರೆದು ಎರಡು ವರ್ಷ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕೋಚ್ ಆಗಿದ್ದರು. ವಾಪಸ್ ಬೆಂಗಳೂರಿಗೆ ಬಂದು ಗುತ್ತಿಗೆ ಆಧಾರದಲ್ಲಿ ಇಲಾಖೆಯ ಸೇವೆಗೆ ಸೇರಿದರು. ಈ ಸಂದರ್ಭದಲ್ಲಿ ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು. ಈಚೆಗೆ ಕೆಲವು ತಿಂಗಳಿಂದ ಅನಾರೋಗ್ಯ ಕಾಡಿತ್ತು.

ಅವರ ಬಳಿ ತರಬೇತಿ ಪಡೆದಿರುವ ಅನೇಕರು ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮಿಂಚಿದ್ದಾರೆ. ಅಂತರರಾಷ್ಟ್ರೀಯ ಅಥ್ಲೀಟ್‌ಗಳಾದ ವಿಲಾಸ್ ನೀಲಗುಂದ, ರೆಬೆಕಾ ಜೋಸ್‌, ಎಚ್‌.ಎಂ.ಜ್ಯೋತಿ, ಶರತ್‌ರಾಜ್, ಮಂಜುನಾಥ್‌ ಗೋಡಿ, ಮೊಹಮ್ಮದ್ ಮುದಸ್ಸಿರ್, ಜೀವನ್‌ ಗೌಡ, ಪರಮೇಶ್ವರ್‌, ಬಿ.ಜಿ.ನಾಗರಾಜ್‌, ಜಿ.ಡಿ.ಗೌರಮ್ಮ ಮತ್ತಿತರು ಅವರ ಶಿಷ್ಯಂದಿರಲ್ಲಿ ಪ್ರಮುಖರು.

’ನನ್ನೊಂದಿಗೆ ಮೊದಲ ತಂಡದಲ್ಲಿದ್ದ ಎಲ್ಲರೂ ರಾಷ್ಟ್ರಮಟ್ಟದಲ್ಲಿ ಚಿನ್ನ ಗೆದ್ದಿದ್ದರು. ಬಹತೇಕರು ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಳಗಿದ್ದಾರೆ. ಕರ್ನಾಟಕದ ಅಪರೂಪದ ಅಥ್ಲೆಟಿಕ್ ಕೋಚ್‌ಗಳಲ್ಲಿ ಒಬ್ಬರಾಗಿದ್ದರು ಅವರು‘ ಎಂದು ಹುಬ್ಬಳ್ಳಿಯಲ್ಲಿ ಕೋಚ್‌ ಆಗಿರುವ ವಿಲಾಸ ನೀಲಗುಂದ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.