ADVERTISEMENT

ಊರ ಜನರ ಪ್ರೀತಿಗೆ.. ದೂರ ಓಟದ ರೀತಿಗೆ...

ವಿಕ್ರಂ ಕಾಂತಿಕೆರೆ
Published 16 ಡಿಸೆಂಬರ್ 2018, 19:45 IST
Last Updated 16 ಡಿಸೆಂಬರ್ 2018, 19:45 IST
ಐ.ಎ ಶಿವಾನಂದ -ಪ್ರಜಾವಾಣಿ ಚಿತ್ರ/ ರಂಜು ಪಿ
ಐ.ಎ ಶಿವಾನಂದ -ಪ್ರಜಾವಾಣಿ ಚಿತ್ರ/ ರಂಜು ಪಿ   

‘ಶಾಲೆಯ ಮೈದಾನದಲ್ಲಿ ಕೊಕ್ಕೊ ತರಬೇತಿ ನಡೆಯುತ್ತಿತ್ತು. ಬೆಳಿಗ್ಗೆ ಎದ್ದು ಶಾಲೆಯ ವರೆಗೆ ಹೋಗುವಷ್ಟರಲ್ಲಿ ಊರಿನ ನಾಯಿಗಳೆಲ್ಲ ಬೊಗಳಲು ಆರಂಭಿಸುತ್ತಿದ್ದವು. ನಮಗೆ ಹೆದರಿಕೆ ಆಗುತ್ತಿತ್ತು. ಊರಿನವರಿಗೆ ತೊಂದರೆ ಆಗುತ್ತದೆ ಎಂದು ಮುಜುಗರ ಬೇರೆ. ಇದಕ್ಕೆ ನಾವೇ ಕಂಡುಕೊಂಡ ದಾರಿ, ರಾತ್ರಿ ಶಾಲೆಯಲ್ಲೇ ಮಲಗುವುದು, ಬೆಳಿಗ್ಗೆ ಎದ್ದು ಅಲ್ಲೇ ಅಭ್ಯಾಸ ಮಾಡುವುದು. ಹೀಗೆ ಆರಂಭಿಸಿದ ಅಭ್ಯಾಸ ನನ್ನ ಜೀವನಕ್ಕೆ ತಿರುವು ನೀಡಿತು; ಕ್ರೀಡಾಜೀವನಕ್ಕೆ ನಾಂದಿ ಹಾಡಿತು...’

1996ರಿಂದ ಆರು ವರ್ಷ ಅಂತರರಾಷ್ಟ್ರೀಯ ಮಟ್ಟದ ದೂರ ಅಂತರದ ಓಟದಲ್ಲಿ ಭಾರತದ ಹೆಸರು ಬೆಳಗಿದ್ದ ಕರ್ನಾಟಕದ ಐ.ಎ.ಶಿವಾನಂದ ಅವರು ತಮ್ಮ ಬದುಕಿನ ಕಥೆ ಹೇಳುವಾಗ ಭಾವುಕರಾಗುತ್ತಾರೆ; ರೋಮಾಂಚನಗೊಳ್ಳುತ್ತಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದ ಹಂಪಿಹೊಳಿಯಲ್ಲಿ ಜನಿಸಿ, ಗದಗ ಜಿಲ್ಲೆಯ ನರಗುಂದದ ಬನಹಟ್ಟಿ ಗ್ರಾಮದಲ್ಲಿ ಬೆಳೆದ ಶಿವಾನಂದ ಮೊದಲು ಪೊಲೀಸ್ ಇಲಾಖೆ, ನಂತರ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭೆ. ನಾಯಿಕಾಟದಿಂದ ತಪ್ಪಿಸಿಕೊಳ್ಳಲು ಕಂಡುಕೊಂಡ ದಾರಿ ಮತ್ತು ಗ್ರಾಮದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಗಳು ಅವರ ಬದುಕಿನ ಹಾದಿಯನ್ನು ಬದಲಿಸಿದವು. ವ್ಯಕ್ತಿತ್ವಕ್ಕೆ ಸಾಣೆ ಹಿಡಿದವು.

ADVERTISEMENT

ಬನಹಟ್ಟಿಯ ಅತ್ತೆ–ಮಾವ ಶಿವಾನಂದ ಅವರನ್ನು ‘ದತ್ತು’ ತೆಗೆದುಕೊಂಡು ಮನೆಯಲ್ಲಿರಿಸಿದ್ದರು. ಆಟ ಆಡುವುದಕ್ಕಾಗಿ ಶಾಲೆಯಲ್ಲಿ ಮಲಗುತ್ತಿದ್ದ ಶಿವಾನಂದ ಬೆಳಿಗ್ಗೆ ಮುಖ ತೊಳೆಯಲು 800 ಮೀಟರ್‌ ದೂರದ ಕೆರೆಯ ಬಳಿಗೆ ಓಡಿಕೊಂಡೇ ಹೋಗುತ್ತಿದ್ದರು. ಹೀಗಾಗಿ ನಿತ್ಯ ಓಟದ ಅಭ್ಯಾಸ ಆಗುತ್ತಿತ್ತು. ಕ್ರೀಡಾಕೂಟಗಳು ಧಾರಾಳವಾಗಿ ನಡೆಯುತ್ತಿದ್ದ ಗ್ರಾಮದಲ್ಲಿ ಒಮ್ಮೆ ಕೊಕ್ಕೊ ಟೂರ್ನಿ ನಡೆದಿತ್ತು. ಅದರಲ್ಲಿ ಶಿವಾನಂದ ಅವರ ಶಾಲಾ ತಂಡ ಸೋತಿತ್ತು. ಆದರೆ ಶಿವಾನಂದ ದೂರ ಅಂತರದ ಓಟದಲ್ಲಿ ಬಹುಮಾನ ಗೆದ್ದಿದ್ದರು.

ಇದರಿಂದ ಖುಷಿಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಕಲಾಲ ಅವರು ಉತ್ಸಾಹ ತುಂಬಿದರು. ಜಿಲ್ಲಾ ಮಟ್ಟದಲ್ಲೂ ಬಹುಮಾನ ಗೆದ್ದ ಶಿವಾನಂದ ಅವರಿಗೆ ಊರಲ್ಲಿ ಸನ್ಮಾನ, ಅಭಿನಂದನೆ ನಡೆಯಿತು.
‘ಊರಿನ ಜನರ ಪ್ರೀತಿಗೆ ಮನಸೋತ ನಾನು ಅವರಿಗೆ ಏನಾದರೂ ವಾಪಸ್ ಕೊಡಬೇಕೆಂದು ಬಯಸಿದೆ. ಕ್ರೀಡೆಯಲ್ಲಿ ಸಾಧನೆ ಮಾಡುವ ಶಕ್ತಿ ಇತ್ತು; ಹುಮ್ಮಸ್ಸೂ ಇತ್ತು. ಆದ್ದರಿಂದ ಕ್ರೀಡೆಯ ಮೂಲಕವೇ ಜನರ ಋಣ ತೀರಿಸಲು ನಿರ್ಧರಿಸಿದೆ. ಅಂದು ತೆಗೆದುಕೊಂಡ ಆ ನಿರ್ಧಾರ ಇಲ್ಲಿಯ ವರೆಗೆ ತಂದು ನಿಲ್ಲಿಸಿತು’ ಎಂದು ಹೇಳುತ್ತಾರೆ ಶಿವಾನಂದ.

ರಾಮದುರ್ಗದಲ್ಲಿ ಪಿಯುಸಿ ಮೊದಲ ವರ್ಷ ಅಧ್ಯಯನ ಮಾಡಿದ ಶಿವಾನಂದ ನಂತರ ಧಾರವಾಡಕ್ಕೆ ಸ್ಥಳಾಂತರಗೊಂಡರು. ಪದವಿ ಶಿಕ್ಷಣ ಮುಗಿಯುತ್ತಿದ್ದಂತೆ ಕ್ರೀಡಾ ಕೋಟಾದಡಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಲಭಿಸಿತು.

‘1998ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ರಾಜ್ಯ ಕ್ರೀಡಾಕೂಟ ನನ್ನ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು. ಅಲ್ಲಿ 1500 ಮೀಟರ್ಸ್ ಓಟದಲ್ಲಿ ನಾನು ಮೊದಲಿಗನಾಗಿದ್ದೆ. ಈ ವಿಷಯ ಆಕಾಶವಾಣಿಯ ಪ್ರದೇಶ ಸಮಾಚಾರದಲ್ಲಿ ಬಿತ್ತರಗೊಂಡಿತ್ತು. ಊರಿಗೆ ಮರಳುವಷ್ಟರಲ್ಲಿ ನಾನು ‘ಹೀರೊ’ ಆಗಿದ್ದೆ. ಸಾಧನೆ ಮಾಡುವ ಉತ್ಸಾಹ ಮತ್ತಷ್ಟು ಹೆಚ್ಚಿತು’ ಎಂದು ಹೇಳುತ್ತಾರೆ ಶಿವಾನಂದ.

ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷಗಳ ಸೇವೆಯ ನಂತರ ಅನಿವಾರ್ಯವಾಗಿ ಆ ಉದ್ಯೋಗ ತೊರೆದು ಭಾರತೀಯ ರೈಲ್ವೆ ಸೇರಿಕೊಂಡ ಶಿವಾನಂದ ಅವರಿಗೆ ಪದಕ ಗೆಲ್ಲುವ ಕೆಚ್ಚು ಮೂಡಿಸಿದ್ದು ತಂದೆಯ ಸಾವು ಮತ್ತು ಅದರಿಂದಾದ ನೋವು!

‘2002ರಲ್ಲಿ ಕೋಲ್ಕತ್ತದಲ್ಲಿ ಭಾರತ ತಂಡದ ತರಬೇತಿ ಶಿಬಿರದಲ್ಲಿದ್ದಾಗ ತಂದೆ ತೀರಿಕೊಂಡ ವಿಷಯ ಗೊತ್ತಾಯಿತು. ಶಿಬಿರದ ಮಧ್ಯದಲ್ಲಿ ಒಂದು ದಿನವೂ ರಜೆ
ಹಾಕುವುದಿಲ್ಲ ಎಂದು ಮಾತು ಕೊಟ್ಟಿದ್ದ ಕಾರಣ ಊರಿಗೆ ಹೋಗಲು ಆಗಲಿಲ್ಲ. ಕೊನೆಗೆ, ಇದ್ದಲ್ಲಿಂದಲೇ ತಂದೆಯ ಆತ್ಮಕ್ಕೆ ಶಾಂತಿ ಕೋರಿದೆ. ಎಲ್ಲ ಕೂಟಗಳಲ್ಲೂ ಗೆಲ್ಲಬೇಕು, ಪದಕ ಗಳಿಸಿ ತಂದೆಗೆ ಅರ್ಪಿಸಬೇಕು ಎಂದು ನನ್ನಷ್ಟಕ್ಕೇ ಶಪಥ ಮಾಡಿದೆ. ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾ ಗ್ರ್ಯಾಂಡ್ ಪ್ರಿಯಲ್ಲಿ ಗೆದ್ದ ಚಿನ್ನ ಸೇರಿದಂತೆ ಆ ವರ್ಷದ ಎಲ್ಲ ಕೂಟಗಳಲ್ಲೂ ಉತ್ತಮ ಸಾಧನೆ ಮಾಡಿದೆ’ ಎನ್ನುವಾಗ ಶಿವಾನಂದ ಅವರ ಮಾತಿನಲ್ಲಿ ಕೃತಾರ್ಥ ಭಾವ ಇತ್ತು. ಅವರ ಸಾಧನೆಗಳಿಗೆ ಮೆಚ್ಚಿದ ರೈಲ್ವೆ ಇಲಾಖೆಯವರು ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್ಐಎಸ್‌) ಕೋಚಿಂಗ್‌ ತರಬೇತಿ ಪಡೆಯಲು ಒತ್ತಾಯಿಸಿದರು. 2010ರಲ್ಲಿ ಎನ್ಐಎಸ್‌ ಸೇರಿಕೊಂಡ ಅವರು 2013ರಿಂದ ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿದರು. 2014ರಲ್ಲಿ ರಾಷ್ಟ್ರೀಯ ಕೋಚ್ ಆಗಿ ನೇಮಕವಾದರು.

ಒಲಿಂಪಿಕ್‌ ಸಾಧನೆಗೆ ಶಿಸ್ತಿನ ಅಭ್ಯಾಸ ಬೇಕು

ಏಷ್ಯಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಶಿವಾನಂದ.

ಶಿಸ್ತಿನಿಂದ ಕೂಡಿದ ಅಭ್ಯಾಸ ಮಾಡಿದರೆ ಒಲಿಂಪಿಕ್ಸ್‌ನಲ್ಲಿ ಪ್ರಮುಖ ರಾಷ್ಟ್ರಗಳ ಕ್ರೀಡಾಪಟುಗಳಿಗೆ ಪೈಪೋಟಿ ನೀಡುವುದು ಕಷ್ಟವಲ್ಲ ಎಂಬುದು ಶಿವಾನಂದ ಅವರ ಅಭಿಪ್ರಾಯ. ಜೂನಿಯರ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಅಜಿತ್ ಕುಮಾರ್, ಚಿಂತಾ ಯಾದವ್‌ ಮತ್ತು ಅರುಣ್ ಅವರ ಮೇಲೆ ಶಿವಾನಂದ ಅಪಾರ ಭರವಸೆ ಇರಿಸಿಕೊಂಡಿದ್ದಾರೆ.

ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

ಯುವ ಸಮುದಾಯ, ವಿಶೇಷವಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪಠ್ಯದಲ್ಲಿ ಎಲ್ಲರಿಗೂ ಒಂದೇ ಸಮನಾದ ಅಂಕ ಗಳಿಸಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಕ್ರೀಡೆ ಕೈ ಹಿಡಿಯುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದರೆ ರೈಲ್ವೆಯಂಥ ಇಲಾಖೆಗಳಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುತ್ತಾರೆ. ಕ್ರೀಡಾಪಟುವಾಗಿ ಗುರುತಿಸಿಕೊಂಡವರಿಗೆ ಸಮಾಜ ಗೌರವ ನೀಡುತ್ತದೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಂತೆಲ್ಲ ಅರಿವಿನ ಸಾಗರ ವಿಸ್ತಾರಗೊಳ್ಳುತ್ತದೆ; ಪ್ರಾಪಂಚಿಕ ಜ್ಞಾನ ಹೆಚ್ಚುತ್ತದೆ

–ಶಿವಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.