ADVERTISEMENT

ಸೆಮಿಗೆ ಆಸ್ಟ್ರೇಲಿಯಾ ಲಗ್ಗೆ

ಹಾಕಿ: ಜೆರೆಮಿ ಮಿಂಚು; ಸ್ಪೇನ್‌ ವಿರುದ್ಧ ಗೆಲುವು

ಪಿಟಿಐ
Published 24 ಜನವರಿ 2023, 14:52 IST
Last Updated 24 ಜನವರಿ 2023, 14:52 IST
ಆಸ್ಟ್ರೇಲಿಯಾ ಮತ್ತು ಸ್ಪೇನ್‌ ಆಟಗಾರರ ನಡುವಣ ಪೈಪೋಟಿ –ಪಿಟಿಐ ಚಿತ್ರ
ಆಸ್ಟ್ರೇಲಿಯಾ ಮತ್ತು ಸ್ಪೇನ್‌ ಆಟಗಾರರ ನಡುವಣ ಪೈಪೋಟಿ –ಪಿಟಿಐ ಚಿತ್ರ   

ಭುವನೇಶ್ವರ: ಜೆರೆಮಿ ಹೇವರ್ಡ್‌ ಅವರ ಮಿಂಚಿನ ಆಟದ ಬಲದಿಂದ ಸ್ಪೇನ್‌ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ, ಎಫ್‌ಐಎಚ್‌ ವಿಶ್ವಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಕಳಿಂಗಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಾಂಗರೂ ನಾಡಿನ ತಂಡ 4–3 ಗೋಲುಗಳಿಂದ ಗೆದ್ದಿತು.

ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಸತತ 12ನೇ ಬಾರಿ ನಾಲ್ಕರಘಟ್ಟ ಪ್ರವೇಶಿಸಿದ ಸಾಧನೆ ಮಾಡಿದೆ. 1978 ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಬಳಿಕದ ಎಲ್ಲ ಟೂರ್ನಿಗಳಲ್ಲೂ ಸೆಮಿ ಪ್ರವೇಶಿಸಿದೆ. 1986, 2010 ಮತ್ತು 2014 ರಲ್ಲಿ ಚಾಂಪಿಯನ್‌ ಆಗಿತ್ತು.

ADVERTISEMENT

ಹೇವರ್ಡ್‌ ಅವರು 33 ಹಾಗೂ 37ನೇ ನಿಮಿಷಗಳಲ್ಲಿ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು. ಇತರ ಗೋಲುಗಳನ್ನು ಫ್ಲಿನ್‌ ಒಗಿಲ್ವಿ (30) ಮತ್ತು ನಾಯಕ ಅರನ್ ಜಲೆವ್‌ಸ್ಕಿ (32) ತಂದಿತ್ತರು.

ಸ್ಪೇನ್‌ ತಂಡದ ಪರ ಕ್ಸೇವಿಯರ್‌ ಗಿಸ್ಪರ್ಟ್‌ (20), ಮಾರ್ಕ್‌ ರೆಸಸೆನ್ಸ್ (24) ಹಾಗೂ ಮಾರ್ಕ್‌ ಮಿರಲೆಸ್ (41) ಚೆಂಡನ್ನು ಗುರಿ ಸೇರಿಸಿದರು.

ಸ್ಪೇನ್‌ ತಂಡ ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಕ್ಕೆ ಕಡಿವಾಣ ತೊಡಿಸಲು ಯಶಸ್ವಿಯಾಗಿತ್ತು. ಆರಂಭದ 15 ನಿಮಿಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಮೂರು ಪೆನಾಲ್ಟಿ ಕಾರ್ನರ್‌ ದೊರೆತರೂ ಗೋಲು ಬರಲಿಲ್ಲ.

ಎರಡನೇ ಕ್ವಾರ್ಟರ್‌ನಲ್ಲಿ ಬೆನ್ನುಬೆನ್ನಿಗೆ ಎರಡು ಗೋಲುಗಳನ್ನು ಗಳಿಸಿದ ಸ್ಪೇನ್‌, ಅಚ್ಚರಿ ಉಂಟುಮಾಡಿತು. ಆದರೆ ಮರುಹೋರಾಟ ನಡೆಸಿದ ಆಸ್ಟ್ರೇಲಿಯಾ ಏಳು ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿ 4–2 ರಲ್ಲಿ ಮೇಲುಗೈ ಪಡೆಯಿತು. ಆ ಬಳಿಕ ಒಂದು ಗೋಲು ಗಳಿಸಿದ ಸ್ಪೇನ್‌ ಸೋಲಿನ ಅಂತರ ಅಲ್ಪ ತಗ್ಗಿಸಿತು.

ಕೊನೆಯ ಕ್ವಾರ್ಟರ್‌ನಲ್ಲಿ ಜಿದ್ದಾಜಿದ್ದಿನ ಸೆಣಸಾಟ ನಡೆದರೂ ಗೋಲು ದಾಖಲಾಗಲಿಲ್ಲ. ಪಂದ್ಯ ಕೊನೆಗೊಳ್ಳಲು ಕೇವಲ ನಾಲ್ಕು ನಿಮಿಷಗಳಿರುವಾಗ ಸ್ಪೇನ್‌ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಆದರೆ ನಾಯಕ ಮಾರ್ಕ್‌ ಮಿರಲೆಸ್‌, ಗೋಲು ಗಳಿಸುವ ಉತ್ತಮ ಅವಕಾಶ ಕಳೆದುಕೊಂಡರು. ಅವರು ಚೆಂಡನ್ನು ಗುರಿ ಸೇರಿಸಿದ್ದರೆ, ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಹೋಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.