
ಲಕ್ಷ್ಯ ಸೇನ್ ಎಎಫ್‌ಪಿ ಫೈಲ್ ಚಿತ್ರ
ಸಿಡ್ನಿ: ವಿಶ್ವದ ಆರನೇ ಕ್ರಮಾಂಕದ ಆಟಗಾರ ಚೌ ಟಿಯೆನ್ ಚೆನ್ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಸೋಲಿಸಿದ ಭಾರತದ ಲಕ್ಷ್ಯ ಸೇನ್ ಅವರು ಶನಿವಾರ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.
ಗಟ್ಟಿ ಮನೋಬಲ ಪ್ರದರ್ಶಿಸಿದ ಲಕ್ಷ್ಯ, ಎರಡನೇ ಸೆಟ್‌ನಲ್ಲಿ ಮೂರು ಬಾರಿ ಮ್ಯಾಚ್ ಪಾಯಿಂಟ್ ಉಳಿಸುವಲ್ಲಿ ಯಶಸ್ವಿಯಾದರಲ್ಲದೇ, ತೈವಾನ್‌ನ 35 ವರ್ಷ ಎದುರಾಳಿಯ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು 17–21, 24–22, 21–16 ರಿಂದ ಗೆದ್ದುಕೊಂಡರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಸೇನ್ ಗೆಲ್ಲಲು 86 ನಿಮಿಷ ತೆಗೆದುಕೊಂಡರು.
24 ವರ್ಷ ವಯಸ್ಸಿನ ಲಕ್ಷ್ಯ ಭಾನುವಾರ ಫೈನಲ್‌ನಲ್ಲಿ ಜಪಾನ್‌ನ ಯುಶಿ ತನಾಕ ಅವರನ್ನು ಎದುರಿಸಲಿದ್ದಾರೆ. ಭಾರತದ ಆಟಗಾರ ಈ ವರ್ಷ ಒಂದೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ಸು ಕಂಡಿಲ್ಲ. ಹಾಂಗ್‌ಕಾಂಗ್ ಓಪನ್‌ನಲ್ಲಿ ಫೈನಲ್ ತಲುಪಿದ್ದೇ ಈ ವರ್ಷ ಇದುವರೆಗಿನ ಅವರ ಉತ್ತಮ ಸಾಧನೆಯೆನಿಸಿದೆ.
ತನಾಕ ಇನ್ನೊಂದು ಸೆಮಿಫೈನಲ್‌ನಲ್ಲಿ ತೈವಾನ್‌ನ ಆಟಗಾರ ಲಿನ್ ಚುನ್ ಯಿ ಅವರನ್ನು 21–18, 21–15 ರಿಂದ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.