ADVERTISEMENT

Australian Open Badminton 2025: ಪ್ರಶಸ್ತಿ ಮುಡಿಗೇರಿಸಿಕೊಂಡ ಲಕ್ಷ್ಯ ಸೇನ್

ಪಿಟಿಐ
Published 23 ನವೆಂಬರ್ 2025, 7:26 IST
Last Updated 23 ನವೆಂಬರ್ 2025, 7:26 IST
<div class="paragraphs"><p>ಟ್ರೋಫಿಯೊಂದಿಗೆ ಲಕ್ಷ್ಯ ಸೇನ್</p></div>

ಟ್ರೋಫಿಯೊಂದಿಗೆ ಲಕ್ಷ್ಯ ಸೇನ್

   

–ಎಎಫ್‌ಪಿ ಚಿತ್ರ

ಸಿಡ್ನಿ: ಜಪಾನ್‌ನ ಯುಶಿ ತನಾಕ ಅವರನ್ನು ಫೈನಲ್‌ನಲ್ಲಿ ನೇರ ಆಟಗಳಿಂದ ಸೋಲಿಸಿದ ಭಾರತದ ಲಕ್ಷ್ಯ ಸೇನ್ ಅವರು ಆಸ್ಟ್ರೇಲಿಯಾ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಆ ಮೂಲಕ ಈ ವರ್ಷ ಅವರು ಪ್ರಶಸ್ತಿ ಬರವನ್ನು ನೀಗಿಸಿಕೊಂಡರು.

ADVERTISEMENT

ಉತ್ತರಾಖಂಡದ ಅಲ್ಮೋರಾದವರಾದ ಸೇನ್ 21–15, 21–11 ರಿಂದ 26 ವರ್ಷ ವಯಸ್ಸಿನ ತನಾಕ ಅವರನ್ನು ಹಿಮ್ಮೆಟ್ಟಿಸಿದರು. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಸೇನ್ ನಂತರ ಪ್ರಶಸ್ತಿ ಬರ ಎದುರಿಸಿದ್ದರು.

38 ನಿಮಿಷಗಳ ಫೈನಲ್ ಗೆದ್ದ ನಂತರ, 24 ವರ್ಷ ವಯಸ್ಸಿನ ಆಟಗಾರ ಬೆರಳುಗಳಿಂದ ಕಿವಿಯನ್ನು ಮುಚ್ಚಿ ಸಂಭ್ರಮ ಆಚರಿಸಿದರು.

‘ಈ ಋತುವಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೆ. ವರುಷದ ಆರಂಭದಲ್ಲಿ ಗಾಯದ ಸಮಸ್ಯೆಗಳೂ ಎದುರಾದವು. ಆದರೆ ನಾನು ಪರಿಶ್ರಮ ಹಾಕಿದೆ. ಪ್ರಶಸ್ತಿಯೊಡನೆ ವರ್ಷ ಮುಗಿಸುತ್ತಿರುವುದು ಸಂತಸ ಮೂಡಿಸಿದೆ’ ಎಂದು ₹4.25 ಕೋಟಿ ಬಹುಮಾನ ಮೊತ್ತದ ಟೂರ್ನಿ ಗೆದ್ದ ನಂತರ ಸೇನ್ ಪ್ರತಿಕ್ರಿಯಿಸಿದರು.

‘ಈ ಯಶಸ್ಸಿನಿಂದ ರೋಮಾಂಚನವಾಗಿದ್ದು, ಮುಂದಿನ ಋತು ಎದುರುನೋಡುತ್ತಿದ್ದೇನೆ. ಇಂದು ಮತ್ತು ಈ ವಾರ ಆಡಿದ ರೀತಿಯಿಂದ ಖುಷಿಯಾಗಿದೆ’ ಎಂದೂ ಹೇಳಿದರು.

2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತರಾದ ಸೇನ್, ಈ ಹಿಂದೆ 2024ರ ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ (ಸೂಪರ್‌ 300 ಮಟ್ಟದ್ದು) ಕೊನೆಯ ಸಲ ಪ್ರಶಸ್ತಿ ಗೆದ್ದಿದ್ದರು. ಸೆಪ್ಟೆಂಬರ್‌ನಲ್ಲಿ ಅವರು ಹಾಂಗ್‌ಕಾಂಗ್ ಸೂಪರ್ 500 ಟೂರ್ನಿಯಲ್ಲಿ ಫೈನಲ್ ತಲುಪಿದ್ದರೂ, ಪ್ರಶಸ್ತಿ ಎಟುಕಿರಲಿಲ್ಲ.

ವಿಶ್ವ ಕ್ರಮಾಂಕದಲ್ಲಿ 26ನೇ ಸ್ಥಾನದಲ್ಲಿರುವ ತನಾಕ ಈ ವರ್ಷ ಎರಡು ಸೂಪರ್ 300 ಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.

14ನೇ ಕ್ರಮಾಂಕದ ಲಕ್ಷ್ಯ, ಪಂದ್ಯದ ಹೆಚ್ಚಿನ ಅವಧಿಯಲ್ಲಿ ಹೊಡೆತಗಳಲ್ಲಿ ನಿಯಂತ್ರಣ ಸಾಧಿಸಿದರು. ಅವರ ಪ್ಲೇಸ್‌ಮೆಂಟ್‌ಗಳು ಕರಾರುವಾಕ್‌ ಆಗಿದ್ದು, ಒಂದೂ ಗೇಮ್ ಬಿಟ್ಟುಕೊಡಲಿಲ್ಲ.

ಲಕ್ಷ್ಯ ಅವರು ಈ ವರ್ಷ ಬಿಡಬ್ಲ್ಯುಎಫ್‌ ಟೂರ್‌ನಲ್ಲಿ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎನಿಸಿದರು. ಕನ್ನಡಿ ಆಯುಷ್‌ ಶೆಟ್ಟಿ ಈ ವರ್ಷದ ಆರಂಭದಲ್ಲಿ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.