ಅರಿಯಾನ್ ಟಿಟ್ಮಸ್
ಕೃಪೆ: X / @AUSOlympicTeam
ಸಿಡ್ನಿ: ಒಲಿಂಪಿಕ್ಸ್‌ನಲ್ಲಿ ನಾಲ್ಕು ಬಾರಿಯ ಈಜು ಚಾಂಪಿಯನ್ ಅರಿಯಾನ್ ಟಿಟ್ಮಸ್ ಅವರು ಗುರುವಾರ ದಿಢೀರ್ ವಿದಾಯ ಘೋಷಿಸಿದ್ದಾರೆ. ಇದು ‘ಕಠಿಣವಾದ ನಿರ್ಧಾರ’ ಎಂದು ಆಸ್ಟ್ರೇಲಿಯಾದ ಈಜು ತಾರೆ ಹೇಳಿದ್ದಾರೆ.
25 ವರ್ಷ ವಯಸ್ಸಿನ ಟಿಟ್ಮಸ್ 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ವಿರಾಮ ಪಡೆದಿದ್ದರು. ಆದರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಪುನರಾಗಮನ ಮಾಡುವ ಯೋಚನೆಯಿದೆ ಎಂದು ಈ ಹಿಂದೆ ಹೇಳಿದ್ದರು.
ಟಿಟ್ಮಸ್ ಒಟ್ಟು 33 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರು ಎಂಟು ಪದಕಗಳನ್ನು (4 ಚಿನ್ನ, 3 ಬೆಳ್ಳಿ, 1 ಕಂಚು) ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 9 ಪದಕಗಳನ್ನು (4 ಚಿನ್ನ, ಎರಡು ಬೆಳ್ಳಿ, ಮೂರು ಕಂಚು) ಮತ್ತು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಎಂಟು ಪದಕಗಳನ್ನು (7 ಚಿನ್ನ, 1 ಬೆಳ್ಳಿ) ಜಯಿಸಿದ್ದಾರೆ.
‘ಇದು ತುಂಬಾ ಕಠಿಣ ನಿರ್ಧಾರ. ಆದರೆ ಈ ತೀರ್ಮಾನ ಕೈಗೊಂಡಿದ್ದರಿಂದ ಸಂತಸವೂ ಆಗಿದೆ’ ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ‘ನಾನು ಈಜನ್ನು ಪ್ರೀತಿಸಿದವಳು. ಈ ಕ್ರೀಡೆಯ ಬಗ್ಗೆ ನನ್ನ ಒಲವು ಪುಟ್ಟಬಾಲೆಯಾಗಿದ್ದ ದಿನಗಳಿಂದಲೇ ಇತ್ತು’ ಎಂದೂ ಉಲ್ಲೇಖಿಸಿದ್ದಾರೆ.
‘ಆದರೆ ಬದುಕಿನಲ್ಲಿ ಕೆಲವು ವಿಷಯಗಳು ಮುಖ್ಯವಾಗಿರುತ್ತವೆ. ಈಜಿಗಿಂತ ಪ್ರಮುಖವೆನಿಸುವ ಕೆಲವು ವಿಷಯಗಳಿವೆ’ ಎಂದು ಹೇಳಿದ್ದಾರೆ.
ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಅವರು 400 ಮೀ. ಫ್ರೀಸ್ಟೈಲ್ ಚಿನ್ನ ಗೆದ್ದಿದ್ದರು. ಆದರೆ ವಿಶ್ವ ದಾಖಲೆಯನ್ನು ಕೆನಡಾದ ಉದಯೋನ್ಮುಖ ತಾರೆ ಸಮ್ಮರ್ ಮೆಕಿಂಟೋಷ್ ಅವರಿಗೆ ಕಳೆದುಕೊಂಡಿದ್ದರು. ಆದರೆ 200 ಮೀ. ಫ್ರೀಸ್ಟೈಲ್‌ನಲ್ಲಿ ವಿಶ್ವದಾಖಲೆ (1ನಿ.52.23ಸೆ.) ಟಿಟ್ಮಸ್ ಹೆಸರಿನಲ್ಲೇ ಉಳಿದಿದೆ. ಟಿಟ್ಮಸ್ ಮತ್ತು ಮೆಕಿಂಟೋಷ್ ನಡುವಣ ಪೈಪೋಟಿ ಪ್ರಮುಖ ಕ್ರೀಡೆಗಳಲ್ಲಿ ಕುತೂಹಲಕ್ಕೆ ಕಾರಣವಾಗುತಿತ್ತು.
‘ನಾನು ಈಜಿಗೆ ಮರಳಲು ಉದ್ದೇಶಿಸಿದ್ದೆ. ಪ್ಯಾರಿಸ್ ಒಲಿಂಪಿಕ್ ಕೂಟ ನನ್ನ ಪಾಲಿಗೆ ಕೊನೆಯದಾಗಬಹುದೆಂದು ಎಂದೂ ಯೋಚಿಸಿರಲಿಲ್ಲ. ಹಾಗೆ ತಿಳಿದಿದ್ದಲ್ಲಿ ಕೊನೆಯ ಸ್ಪರ್ಧೆಯನ್ನು ಇನ್ನಷ್ಟು ಇಷ್ಟಪಟ್ಟು ಈಜುತ್ತಿದ್ದೆ’ ಎಂದು ಹೇಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 400 ಮೀ. ಫ್ರೀಸ್ಟೈಲ್ ಚಿನ್ನ ಮತ್ತು 4x200 ಮೀ. ಫ್ರೀಸ್ಟೈಲ್ ರಿಲೆಯಲ್ಲಿ ಚಿನ್ನ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.