ಪ್ರೊ ಕಬಡ್ಡಿ ಲೀಗ್
ನವದೆಹಲಿ: ಉತ್ತಮ ಲಯದಲ್ಲಿರುವ ರೇಡರ್ ಅಯಾನ್ ಲೋಚಬ್ ಅವರ ಜೀವನಶ್ರೇಷ್ಠ 27 ಅಂಕಗಳ ನೆರವಿನಿಂದ ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್ ತಂಡವನ್ನು 51–49 ಅಂಕಗಳಿಂದ ಸೋಲಿಸಿತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ವಿರಾಮದ ವೇಳೆ 26–23 ಅಂಕಗಳಿಂದ ಮುಂದಿತ್ತು. ಆದರೆ ಉತ್ತರಾರ್ಧದ ನಂತರ ಪಟ್ನಾ ತಂಡ 28 ಅಂಕಗಳನ್ನು ಗಳಿಸಿ ಗೆಲುವು ಸಾಧಿಸಿತು. ಅಂಕಿತ್ ಕುಮಾರ್ 5 ಹಾಗೂ ಡಿಫೆಂಡರ್ ಮಿಲನ್ 4 ಅಂಕ ಗಳಿಸಿದರು.
ವಾರಿಯರ್ಸ್ ಪರ ನಾಯಕ ಹಾಗೂ ಪ್ರಮುಖ ರೇಡರ್ ದೇವಾಂಕ್ ಮತ್ತೊಮ್ಮೆ ಮಿಂಚಿ 25 ಅಂಕ ಗಳಿಸಿದರು. ಅವರಿಗೆ ಹಿಮಾಂಶು ನರ್ವಾಲ್ (7 ಅಂಕ) ಅವರಿಂದ ಮಾತ್ರ ಬೆಂಬಲ ದೊರೆಯಿತು.
ಈ ಗೆಲುವಿನಿಂದ ಪಟ್ನಾ ತಂಡ 12ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಏರಿತು. ಎರಡೂ ತಂಡಗಳು (ಪಟ್ನಾ ಮತ್ತು ಬೆಂಗಾಲ್) ತಲಾ 10 ಅಂಕ ಗಳಿಸಿವೆ.
ಇನ್ನೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ 37–31 ರಲ್ಲಿ ಆರು ಅಂಕಗಳಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಡೆಲ್ಲಿ ಪರ ಸಬ್‌ಸ್ಟಿಟ್ಯೂಟ್ ಅಕ್ಷಿತ್ 12 ಅಂಕ ಗಳಿಸಿ ಮಿಂಚಿದರು. ತಲೈವಾಸ್ ಪರ ನಾಯಕ ಅರ್ಜುನ್ ದೇಶ್ವಾಲ್ 11 ಅಂಕ ಗಳಿಸಿ ಮತ್ತೊಮ್ಮೆ ಸೂಪರ್ ಟೆನ್ ಸಾಧಿಸಿದರು.
ಈಗಾಗಲೇ ಪ್ಲೇ ಆಫ್‌ಗೆ ಸ್ಥಾನ ಕಾದಿರಿಸಿರುವ ಡೆಲ್ಲಿ ತಂಡಕ್ಕೆ ಇದು 16 ಪಂದ್ಯಗಳಲ್ಲಿ 13 ಜಯ. 26 ಅಂಕ ಸಂಗ್ರಹಿಸಿ ಅದು ಎರಡನೇ ಸ್ಥಾನದಲ್ಲಿದೆ. ತಲೈವಾಸ್ (17 ಪಂದ್ಯಗಳಲ್ಲಿ 12 ಅಂಕ) ಎಂಟನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.