ಅಸ್ತಾನಾ (ಪಿಟಿಐ): ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರು ಭಾರತದ ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಕಾರಣರಾದರು. ಮಹಿಳಾ ಡಬಲ್ಸ್‌ನಲ್ಲಿ ಶನಿವಾರ ಸೆಮಿಫೈನಲ್ ತಲುಪುವ ಮೂಲಕ ಭಾರತದ ಆಟಗಾರ್ತಿಯರು ಪದಕವನ್ನು ಖಚಿತಪಡಿಸಿಕೊಂಡರು.
ಕಳೆದ ವರ್ಷ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಸಲ ಕಂಚಿನ ಪದಕ ಗೆಲ್ಲುವ ಹಾದಿಯಲ್ಲಿ ಮುಖರ್ಜಿದ್ವಯರು ಚೀನಾದ ವಿಶ್ವ ಚಾಂಪಿಯನ್‌ಷಿಪ್ ಆಟಗಾರ್ತಿಯರನ್ನು ಸೋಲಿಸಿದ್ದರು. ಶನಿವಾರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿದ ಐಹಿಕಾ– ಸುತೀರ್ತ 10–12, 11–7, 11–9, 11–8 ರಿಂದ ದಕ್ಷಿಣ ಕೊರಿಯಾದ ಕಿಮ್ ನೆಯಿಯೊಂಗ್– ಲೀ ಯುನ್‌ಹ್ಯೇ ಅವರನ್ನು ಸೋಲಿಸಿದರು.
ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿಯರು ಸೆಮಿಫೈನಲ್‌ನಲ್ಲಿ ಜಪಾನ್‌ನ ಮಿವಾ ಹರಿಮೊಟೊ– ಮಿಯು ಕಿಶಾರಾ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್ ಹಾಗೂ ಫೈನಲ್– ಎರಡೂ ಭಾನುವಾರ ನಡೆಯಲಿದೆ.
ಮಾನವ್– ಮಾನುಷ್ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಮಾನವ್ ಠಕ್ಕರ್ ಮತ್ತು ಮಾನುಷ್ ಶಾ ಅವರು ನಿರೀಕ್ಷೆ ಮೀರಿ ಪ್ರಬಲ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.
60ನೇ ಕ್ರಮಾಂಕದ ಮಾನವ್ ತಮ್ಮ ವೃತ್ತಿ ಜೀವನದಲ್ಲೇ ದೊಡ್ಡ ಅನಿರೀಕ್ಷಿತ ಫಲಿತಾಂಶದಲ್ಲಿ 14ನೇ ಕ್ರಮಾಂಕದ ಜಾಂಗ್ ವೂಜಿನ್ (ದಕ್ಷಿಣ ಕೊರಿಯಾ) ಅವರಿಗೆ 5–11, 11–9, 5–11 11–9, 11–7 ರಿಂದ ಆಘಾತ ನೀಡಿ 16ರ ಸುತ್ತಿಗೆ ಮುನ್ನಡೆದರು.
ವಿಶ್ವ ಕ್ರಮಾಂಕದಲ್ಲಿ 115ನೇ ಸ್ಥಾನದಲ್ಲಿರುವ ಮಾನುಷ್ ಅಮೋಘವಾಗಿ ಆಟವಾಡಿ 11–9, 11–5, 11–6 ರಿಂದ 23ನೇ ಕ್ರಮಾಂಕದ ಆನ್ ಜೇಹ್ಯುನ್ (ದಕ್ಷಿಣ ಕೊರಿಯಾ) ವಿರುದ್ಧ ಜಯಗಳಿಸಿದರು.
ಹರ್ಮೀತ್ ದೇಸಾಯಿ ಅವರ ಸಿಂಗಲ್ಸ್ ಸವಾಲು 32ರ ಸುತ್ತಿನಲ್ಲಿ ಅಂತಗಯಗೊಂಡಿತು. ಅವರು ನೇರ ಆಟಗಳಿಂದ 30ನೇ ಕ್ರಮಾಂಕದ ಲಿಂಗ್ ಜೊಂಗ್‌ಹೂನ್ ಅವರಿಗೆ ಮಣಿದರು.
ಅನುಭವಿ ಆಟಗಾರ ಶರತ್ ಕಮಲ್ ಅವರೂ ಆಘಾತ ಅನುಭವಿಸಿದರು. 42ನೇ ಕ್ರಮಾಂಕದ ಶರತ್, 506ನೇ ಕ್ರಮಾಂಕದ ಮೊಹಮ್ಮದ್ ಅಲ್‌ಖಸಾಬ್ ಅವರಿಗೆ ಶುಕ್ರವಾರ ಸಂಜೆ ಮಣಿದರು. ಸಿಂಗಲ್ಸ್‌ನಲ್ಲಿ ಅವರು ಭಾರತದ ಅಗ್ರ ಆಟಗಾರರಾಗಿದ್ದಾರೆ. ಜಿ. ಸತ್ಯನ್ ಅವರು ಉತ್ತರ ಕೊರಿಯಾದ ಹ್ಯಾಮ್ ಯು ಸಾಂಗ್ ಅವರಿಗೆ ಮಣಿದರು. ಸಾಂಗ್ ಅವರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.