ADVERTISEMENT

ತೈಪೆ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಗೆ ಆಯುಷ್‌, ಉನ್ನತಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 16:04 IST
Last Updated 8 ಮೇ 2025, 16:04 IST
ಆಯುಷ್‌ ಶೆಟ್ಟಿ
ಆಯುಷ್‌ ಶೆಟ್ಟಿ   

ತೈಪೆ: ಭಾರತದ ಯುವ ಆಟಗಾರರಾದ ಆಯುಷ್ ಶೆಟ್ಟಿ ಮತ್ತು ಉನ್ನತಿ ಹೂಡಾ ಅವರು ತೈಪೆ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದರು.

ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 20 ವರ್ಷ ವಯಸ್ಸಿನ ಆಯುಷ್‌ 21-16, 15-21, 21-17ರಿಂದ ಸ್ವದೇಶದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಹಿಮ್ಮೆಟ್ಟಿಸಿದರು. 

ಹಿಂದಿನ ಸುತ್ತಿನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ರನ್ನರ್ ಅಪ್ ಲೀ ಚಿಯಾ ಹಾವೊ (ತೈವಾನ್‌) ಅವರಿಗೆ ಆಘಾತ ನೀಡಿದ್ದ ಕನ್ನಡಿಗ ಆಯುಷ್‌ ಅವರು ಎಂಟರ ಘಟ್ಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಬ್ರಿಯಾನ್ ಯಾಂಗ್ (ಕೆನಡಾ) ಅವರನ್ನು ಎದುರಿಸಲಿದ್ದಾರೆ.

ADVERTISEMENT

17 ವರ್ಷ ವಯಸ್ಸಿನ ಉನ್ನತಿ ಮಹಿಳೆಯರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 21-12, 21-7ರಿಂದ ಆತಿಥೇಯ ಚೀನಾ ತೈಪೆಯ ಲಿನ್ ಸಿಹ್ ಯುನ್ ಅವರನ್ನು ಸೋಲಿಸಿದರು. ಉನ್ನತಿ ಮುಂದಿನ ಸುತ್ತಿನಲ್ಲಿ ಸ್ಥಳೀಯ ಆಟಗಾರ್ತಿ ಹಂಗ್‌ ಯಿ ಟಿಂಗ್‌ ಅವರನ್ನು ಎದುರಿಸುವರು.

2023ರ ರಾಷ್ಟ್ರೀಯ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ತರುಣ್ ಮನ್ನೆಪಲ್ಲಿ ಅವರು ಪುರುಷರ ಸಿಂಗಲ್ಸ್‌ನಲ್ಲಿ ನಿರಾಸೆ ಮೂಡಿಸಿದರು. ಅವರು ಎರಡನೇ ಸುತ್ತಿನಲ್ಲಿ 13-21, 9-21ರಿಂದ ಇಂಡೊನೇಷ್ಯಾದ ಮೊಹ್ ಜಾಕಿ ಉಬೈದಿಲ್ಲಾ ವಿರುದ್ಧ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.