ADVERTISEMENT

ಟೀಮ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಭಾರತ

ಪಿಟಿಐ
Published 14 ಫೆಬ್ರುವರಿ 2020, 18:48 IST
Last Updated 14 ಫೆಬ್ರುವರಿ 2020, 18:48 IST

ಮನಿಲಾ: ರೋಚಕ ಹಣಾಹಣಿಯಲ್ಲಿ ಭಾರತದ ಪುರುಷರ ತಂಡ 3–2 ರಿಂದ ಥಾಯ್ಲೆಂಡ್‌ ತಂಡವನ್ನು ಸೋಲಿಸಿ ಏಷ್ಯನ್‌ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ ತಲುಪಿತು. ಆ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದೆ.

ಶುಕ್ರವಾರ ಮೊದಲ ಸಿಂಗಲ್ಸ್‌ನಲ್ಲಿ ಬಿ.ಸಾಯಿಪ್ರಣೀತ್‌ ತೀವ್ರ ಹೋರಾಟದ ನಂತರ 14–21, 21–14, 12–21 ರಿಂದ 12ನೇ ಕ್ರಮಾಂಕದ ಕಾಂತಫೊನ್‌ ವಾಂಗ್‌ಚರೋನ್‌ ಅವರಿಗೆ ಮಣಿದರು. ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ನೇರ ಆಟಗಳಿಂದ ಕುನ್ಲವುತ್‌ ವಿಟಿಡ್‌ಸರ್ನ್ ಅವರಿಗೆ ಶರಣಾಗಿ ಭಾರತ 0–2 ಹಿನ್ನಡೆ ಅನುಭವಿಸಿತು. ಆದರೆ ಮೊದಲ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌– ಧ್ರುವ್‌ ಕಪಿಲ ಜೋಡಿ ಡಬಲ್ಸ್‌ನಲ್ಲಿ ಎದುರಾಳಿ ಜೋಡಿಯನ್ನು ಸೋಲಿಸಿತು. ಲಕ್ಷ್ಯ ಸೇನ್‌ ಸಿಂಗಲ್ಸ್‌ನಲ್ಲಿ 21–19, 21–18 ರಿಂದ ಸುಪ್ಪನ್ಯು ಅವಿಹಿಂಗ್‌ಸನೋನ್‌ ಮೇಲೆ ಗೆದ್ದರು. ಚಿರಾಗ್‌ ಶೆಟ್ಟಿ– ಶ್ರೀಕಾಂತ್‌ ಡಬಲ್ಸ್‌ನಲ್ಲಿ ಗೆಲ್ಲುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.

2016ರಲ್ಲಿ (ಹೈದರಾಬಾದ್‌),ಭಾರತ ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಆ ಬಾರಿ ಸೆಮಿಫೈನಲ್‌ನಲ್ಲಿ ಇಂಡೊನೇಷ್ಯಾಕ್ಕೆ ಮಣಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.