ADVERTISEMENT

ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಪರಾಭವ

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಅಶ್ವಿನಿ–ತನಿಶಾಗೂ ಸೋಲು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:45 IST
Last Updated 27 ಜನವರಿ 2023, 21:45 IST
ಲಕ್ಷ್ಯ ಸೇನ್‌– ಪಿಟಿಐ ಚಿತ್ರ
ಲಕ್ಷ್ಯ ಸೇನ್‌– ಪಿಟಿಐ ಚಿತ್ರ   

ಜಕಾರ್ತ: ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅವರ ಅಭಿಯಾನ ಅಂತ್ಯಗೊಂಡಿದೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯ 21-15, 10-21, 13-21ರಿಂದ ಆತಿಥೇಯ ಫೆವರೀಟ್‌ ಆಟಗಾರ ಜೊನಾಥನ್ ಕ್ರಿಸ್ಟಿ ಎದುರು ಎಡವಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಲಕ್ಷ್ಯ ಮೂರನೇ ರ‍್ಯಾಂಕಿನ ಕ್ರಿಸ್ಟಿ ಎದುರು 62 ನಿಮಿಷಗಳ ಹಣಾಹಣಿಯಲ್ಲಿ ಸೋಲೊಪ್ಪಿಕೊಂಡರು.

ADVERTISEMENT

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ ಲಕ್ಷ್ಯ ಮೊದಲ ಗೇಮ್‌ನ ವಿರಾಮದ ವೇಳೆಗೆ 8–5ರಿಂದ ಮುಂದಿದ್ದರು. ಬಳಿಕ ತಿರುಗೇಟು ನೀಡಿದ ಕ್ರಿಸ್ಟಿ 15–15ರ ಸಮಬಲ ಸಾಧಿಸಿದರು. ಆದರೆ ಸತತ ಆರು ಪಾಯಿಂಟ್ಸ್ ಕಲೆಹಾಕಿದ ಸೇನ್‌ ಅವರು ಗೇಮ್ ತಮ್ಮದಾಗಿಸಿಕೊಂಡರು.

ಮೊದಲ ಗೇಮ್‌ ಬಳಿಕ ಕ್ರಿಸ್ಟಿ ಸಂಪೂರ್ಣ ‘ಭಿನ್ನ’ ಆಟಗಾರನಾಗಿ ಕಂಡುಬಂದರು. ಎರಡನೇ ಗೇಮ್‌ನ ಆರಂಭದಲ್ಲಿ 11–2ರಿಂದ ಮುನ್ನಡೆ ಸಾಧಿಸಿದ ಅವರು ಬಳಿಕ ತಿರುಗಿ ನೋಡಲಿಲ್ಲ. ಮೂರನೇ ಗೇಮ್‌ನಲ್ಲೂ ಅದೇ ಲಯ ಕಾಯ್ದುಕೊಂಡ ಇಂಡೊನೇಷ್ಯಾ ಆಟಗಾರ ಕ್ರಿಸ್ಟಿ ಗೆಲುವಿನ ನಗೆ ಬೀರಿದರು.

ಲಕ್ಷ್ಯ ಸೇನ್ ಅವರು ಕಳೆದ ವಾರ ನಡೆದ ಇಂಡಿಯಾ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತಿದ್ದರು.

ಅಶ್ವಿನಿ–ತನಿಶಾಗೆ ಸೋಲು: ಮಹಿಳಾ ಡಬಲ್ಸ್ ಸ್ಪರ್ಧೆಯಲ್ಲಿದ್ದ ಭಾರತದ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ತೊ ಜೋಡಿಯೂ ಎಂಟರಘಟ್ಟದಲ್ಲಿ ಸೋಲು ಅನುಭವಿಸಿತು. ಭಾರತದ ಆಟಗಾರ್ತಿಯರು 13-21, 18-21ರಿಂದ ಜಪಾನ್‌ನ ಯೂಕಿ ಫುಕುಶಿಮಾ ಮತ್ತು ಸಯಕಾ ಹಿರೊಟಾ ಎದುರು ಮುಗ್ಗರಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.