ADVERTISEMENT

ಸಿಂಧು, ಸೈನಾಗೆ ಲಯ ಕಂಡುಕೊಳ್ಳುವ ಸವಾಲು

ಇಂದಿನಿಂದ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಹಿಂದೆ ಸರಿದ ಶ್ರೀಕಾಂತ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:30 IST
Last Updated 4 ನವೆಂಬರ್ 2019, 19:30 IST
ಸೈನಾ ನೆಹ್ವಾಲ್‌, ಪಿ.ವಿ.ಸಿಂಧು
ಸೈನಾ ನೆಹ್ವಾಲ್‌, ಪಿ.ವಿ.ಸಿಂಧು   

ಫುಜೌ: ಹಿಂದಿನ ಮೂರು ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾಗಿದ್ದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು, ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ.

ಮಂಗಳವಾರದಿಂದ ಆರಂಭವಾಗುವ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಇವರು ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು, ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಅವರು, ಜರ್ಮನಿಯ ಯವೊನ್‌ ಲೀ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ಎಂಟನೇ ಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್‌, ಚೀನಾದ ಕಾಯ್‌ ಯಾನ್‌ ಯಾನ್‌ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ಹಿಂದೆ ಸರಿದ ಶ್ರೀಕಾಂತ್‌: ‍ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಕಿದಂಬಿ ಶ್ರೀಕಾಂತ್‌, ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಮೊದಲ ಸುತ್ತಿನಲ್ಲಿ ಶ್ರೀಕಾಂತ್‌, ಜಪಾನ್‌ನ ಕೆಂಟೊ ಮೊಮೊಟಾ ಎದುರು ಸೆಣಸಬೇಕಿತ್ತು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಬಿ.ಸಾಯಿ ಪ್ರಣೀತ್‌, ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ಎದುರು ಹೋರಾಡಲಿದ್ದಾರೆ.

ಸಮೀರ್‌ ವರ್ಮಾಗೆ ಹಾಂಕಾಂಗ್‌ನ ಲೀ ಚೆವುಕ್‌ ಯಿವು ಸವಾಲು ಎದುರಾಗಲಿದೆ. ಎಚ್‌.ಎಸ್‌.ಪ್ರಣಯ್‌ ಅವರು ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ವಿರುದ್ಧ ಆಡಲಿದ್ದಾರೆ.

ಇಂಡಿಯಾ ಮತ್ತ ಕೊರಿಯಾ ಓಪನ್‌ ಟೂರ್ನಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್‌, ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಸಿಟ್ಟಿಕೊಮ್‌ ಥಾಮಸಿನ್‌ ಎದುರು ಸೆಣಸುವರು.

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿಯು ದಕ್ಷಿಣ ಕೊರಿಯಾದ ಕಿಮ್‌ ಜಿ ಜುಂಗ್‌ ಮತ್ತು ಲೀ ಯಾಂಗ್‌ ಡೇ ಎದುರು ಆಡಲಿದೆ.

ಮನು ಅತ್ರಿ ಮತ್ತು ಬಿ.ಸಾಯಿ ಪ್ರಣೀತ್‌ ಅವರು ಮಲೇಷ್ಯಾದ ಆ್ಯರನ್‌ ಚಿಯಾ ಮತ್ತು ಸೊಹ್‌ ವೂಯಿ ಯಿಕ್‌ ವಿರುದ್ಧ ಸೆಣಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ಚೀನಾದ ಲಿ ವೆನ್‌ ಮೆಯಿ ಮತ್ತು ಜೆಂಗ್‌ ಯು ವಿರುದ್ಧ ಹೋರಾಡಲಿದ್ದಾರೆ.

ಮಿಶ್ರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ಗೆ ಕೆನಡಾದ ಜೊಶುವಾ ಹರ್ಬರ್ಟ್‌ ಮತ್ತು ಜೋಸೆಫಿನ್‌ ಅವರ ಸವಾಲು ಎದುರಾಗಲಿದೆ.

ಪ್ರಣವ್‌ ಜೆರ‍್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ವಾಂಗ್‌ ಚಿ ಲಿನ್‌ ಮತ್ತು ಚೆಂಗ್‌ ಚಿ ಯಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.