ADVERTISEMENT

ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌–ಚಿರಾಗ್

ಪಿಟಿಐ
Published 9 ಸೆಪ್ಟೆಂಬರ್ 2025, 15:37 IST
Last Updated 9 ಸೆಪ್ಟೆಂಬರ್ 2025, 15:37 IST
   

ಹಾಂಗ್‌ ಕಾಂಗ್‌: ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಹಾಂಗ್‌ ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್‌ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಸಂಪಾದಿಸಿದರು.

ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಸಾತ್ವಿಕ್– ಚಿರಾಗ್ ಜೋಡಿ, ಇಲ್ಲಿ ಮೊದಲ ಸುತ್ತಿನಲ್ಲಿ ತೈವಾನ್‌ನ ಚಿಯು ಸಿಯಾಂಗ್ ಚೀಯ– ವಾಂಗ್‌ ಚಿ ಲಿನ್ ಜೋಡಿಯನ್ನು 21–13, 18–21, 21–10 ರಿಂದ ಸೋಲಿಸಿತು.

ಸಿಂಗಲ್ಸ್‌ ಕ್ವಾಲಿಫೈಯರ್ಸ್‌ನಲ್ಲಿ ಕಿರಣ್‌ ಜಾರ್ಜ್ ಸತತ ಎರಡು ಪಂದ್ಯಗಳನ್ನು ಗೆದ್ದು ಪ್ರಧಾನ ಸುತ್ತಿಗೆ ಅರ್ಹತೆ ಪಡೆದರು. ವಿಶ್ವ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಮೊದಲು ಮಲೇಷ್ಯಾದ ಚಿಯಾಮ್ ಜೂನ್ ವೀ ಅವರನ್ನು 21–14, 21–13 ರಿಂದ ಸೋಲಿಸಿದರು. ನಂತರ ಸ್ವದೇಶದ ಎಸ್‌.ಶಂಕರ ಮುತ್ತುಸ್ವಾಮಿ ಸುಬ್ರಮಣಿಯನ್ ಅವರನ್ನು 21–10, 2105 ರಿಂದ ಸೋಲಿಸಿದರು.

ADVERTISEMENT

ಕಿರಣ್ ಜಾರ್ಜ್ ಮೊದಲ ಸುತ್ತಿನಲ್ಲಿ ಸಿಂಗಪುರದ ಜಿಯಾ ಹೆಂಗ್‌ ಜೇಸನ್ ತೇ ಅವರನ್ನು ಎದುರಿಸಲಿದ್ದಾರೆ.

ಭಾರತದ ತರುಣ್ ಮನ್ನೇಪಲ್ಲಿ ಅವರು ದಿನದ ಅತಿ ದೊಡ್ಡ ಅನಿರೀಕ್ಷಿತ ಫಲಿತಾಂಶದಲ್ಲಿ ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ, ಸ್ವದೇಶದ ಕಿದಂಬಿ ಶ್ರೀಕಾಂತ್ ಅವರನ್ನು ಅರ್ಹತಾ ವಿಭಾಗದ ಮೊದಲ ಸುತ್ತಿನಲ್ಲಿ 28–26, 21–13 ರಿಂದ ಹಿಮ್ಮೆಟ್ಟಿಸಿದರು. ಆದರೆ, 20 ವರ್ಷ ವಯಸ್ಸಿನ ತರುಣ್ ಮುಂದಿನ ಸುತ್ತಿನಲ್ಲೇ 21–23, 13–21, 18–21 ರಲ್ಲಿ ಮಲೇಷ್ಯಾದ ನಾಲ್ಕನೇ ಶ್ರೇಯಾಂಕದ ಜಸ್ಟಿನ್ ಹೋಹ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.