ADVERTISEMENT

ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ತಸ್ನಿಮ್‌ ಚಾಂಪಿಯನ್‌

ತಾರಾಗೆ ಬೆಳ್ಳಿ

ಪಿಟಿಐ
Published 15 ಡಿಸೆಂಬರ್ 2019, 16:19 IST
Last Updated 15 ಡಿಸೆಂಬರ್ 2019, 16:19 IST
ತಸ್ನಿಂ ಮಿರ್‌ (ಎಡ)
ತಸ್ನಿಂ ಮಿರ್‌ (ಎಡ)   

ಸುರಬಯಾ, ಇಂಡೊನೇಷ್ಯಾ: ಭಾರತದ ತಸ್ನಿಮ್‌ ಮಿರ್‌ ಅವರು ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ 15 ವರ್ಷದೊಳಗಿನವರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ತಮ್ಮದೇ ದೇಶದ ತಾರಾ ಶಾ ಅವರನ್ನು ಪರಾಭವಗೊಳಿಸಿದರು.

ಪ್ರಬಲ ಹೋರಾಟ ಕಂಡ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ತಸ್ನಿಮ್‌, 17–21, 21–11, 21–19ರಿಂದ ಗೆಲುವಿನ ನಗೆ ಬೀರಿದರು.

ಈ ಗೆಲುವಿನೊಂದಿಗೆ ತಸ್ನಿಮ್‌ ಚಿನ್ನದ ಪದಕ ಕೊರಳಿಗೇರಿಸಿಕೊಂಡರೆ, ತಾರಾ ಅವರಿಗೆ ಬೆಳ್ಳಿ ಒಲಿಯಿತು. ಹೋದ ವರ್ಷ ಮಯನ್ಮಾರ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಇವರಿಬ್ಬರೂ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು.

ADVERTISEMENT

55 ನಿಮಿಷಗಳಲ್ಲಿ ಕೊನೆಗೊಂಡ ಫೈನಲ್‌ ಪಂದ್ಯದ ಆರಂಭದ ಗೇಮ್‌ ಅನ್ನು ತಾರಾ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಶೀಘ್ರ ಲಯದ ಹಳಿಗೆ ಮರಳಿದ ತಸ್ನಿಮ್‌ ಎರಡನೇ ಗೇಮ್‌ಅನ್ನು ಸುಲಭವಾಗಿ ಗೆದ್ದರು. ಮೂರನೇ ಗೇಮ್‌ನಲ್ಲಿ ತಾರಾ ಪ್ರಬಲ ಹೋರಾಟ ನೀಡಿದರೂ ತಸ್ನಿಮ್‌ ಅವರು ಗೇಮ್‌ ಹಾಗೂ ಪಂದ್ಯ ಬಿಟ್ಟುಕೊಡಲಿಲ್ಲ.

ತಸ್ನಿಮ್‌ ಹಾಗೂ ತಾರಾಶನಿವಾರ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಜಪಾನ್‌ ಆಟಗಾರ್ತಿಯರ ಎದುರು ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರು. ತಸ್ನಿಮ್‌ ಅವರು ಸೋರಾ ಇಶಿಯೊಕಾ ಎದುರು 21–16, 21–11ರಿಂದ ಮತ್ತು ತಾರಾ ಅವರು ಕಜುನೆ ಇವಾಟೊ ವಿರುದ್ಧ 21–18, 21–14ರಿಂದ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.