ADVERTISEMENT

ಕ್ಷಮೆ ಕೇಳಿದ ಶ್ರೀಕಾಂತ್‌: ಖೇಲ್‌ರತ್ನಗೆ ಶಿಫಾರಸು

ಪಿಟಿಐ
Published 19 ಜೂನ್ 2020, 16:52 IST
Last Updated 19 ಜೂನ್ 2020, 16:52 IST
ಕಿದಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ   

ನವದೆಹಲಿ: ಅಶಿಸ್ತು ತೋರಿದ್ದ ತಪ್ಪಿಗೆ ಕ್ಷಮೆ ಕೋರಿದ್ದ ಕಿದಂಬಿ ಶ್ರೀಕಾಂತ್‌ ಅವರನ್ನು ಭಾರತ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ (ಬಿಎಐ) ಶುಕ್ರವಾರ ಖೇಲ್‌ ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನೊಬ್ಬ ಆಟಗಾರ ಎಚ್‌.ಎಸ್‌.ಪ್ರಣಯ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಮನಿಲಾದಲ್ಲಿ ನಡೆದ ಏಷ್ಯನ್‌ ಟೀಮ್‌ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಹಾಗೂ ಪ್ರಣಯ್ ಕಣಕ್ಕಿಳಿದಿರಲಿಲ್ಲ. ಬದಲಾಗಿ ಬಾರ್ಸಿಲೋನಾದಲ್ಲಿ ನಡೆದ ಮತ್ತೊಂದು ಟೂರ್ನಿಯಲ್ಲಿ ಆಡಲು ತೆರಳಿದ್ದರು. ಭಾರತ ತಂಡ ಮನಿಲಾದಲ್ಲಿ ನಾಲ್ಕರ ಘಟ್ಟದಲ್ಲಿ ಮುಗ್ಗರಿಸಿದರೂ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಶಿಸ್ತು ಕ್ರಮದ ಆಧಾರದಲ್ಲಿ ಬಿಎಐ, ವಿಶ್ವದ 14ನೇ ಕ್ರಮಾಂಕದ ಆಟಗಾರ ಶ್ರೀಕಾಂತ್‌ ಹಾಗೂ 28ನೇ ರ‍್ಯಾಂಕಿನ ಪ್ರಣಯ್‌ ಅವರನ್ನು ಕ್ರಮವಾಗಿ ರಾಜೀವ್‌ ಗಾಂಧಿ ಖೇಲ್‌ರತ್ನ ಹಾಗೂ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರಲಿಲ್ಲ.

ADVERTISEMENT

ಆದಾಗ್ಯೂ ಶ್ರೀಕಾಂತ್‌ ಅವರ ಅರ್ಜಿಯನ್ನು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಪ್ರಣಯ್ ಅವರನ್ನು ಕಡೆಗಣಿಸಲಾಗಿತ್ತು. ಬಿಎಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ 15 ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿತ್ತು.

‘ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ಸೂಚನೆಯನ್ನು ಧಿಕ್ಕರಿಸಿ ಶ್ರೀಕಾಂತ್‌ ಹಾಗೂ ಪ್ರಣಯ್‌ ಅವರುತಂಡ ತೊರೆದಿದ್ದರು. ಇದರಿಂದಭಾರತದ ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಹಾಳಾಗಿತ್ತು. ಶ್ರೀಕಾಂತ್‌ ಅವರು ತಮ್ಮ ತಪ್ಪು ‌ಒಪ್ಪಿಕೊಂಡು ಪತ್ರ ಕಳುಹಿಸಿದ್ದಾರೆ. ಭವಿಷ್ಯದಲ್ಲಿ ಈ ರೀತಿ ಅಶಿಸ್ತು ತೋರುವುದಿಲ್ಲ ಎಂದು ತಿಳಿಸಿದ್ದಾರೆ‌’ ಎಂದು ಬಿಎಐ ಹೇಳಿದೆ.

‘ಶ್ರೀಕಾಂತ್‌ ಅವರ ಪ್ರತಿಭೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅವರ ಹೆಸರನ್ನು ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ’ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ತಿಳಿಸಿದ್ದಾರೆ.

ಸತತ ಎರಡನೇ ವರ್ಷ ಅರ್ಜುನ ಪ್ರಶಸ್ತಿ ಶಿಫಾರಸು ಪ್ರಕ್ರಿಯೆಯಿಂದ ಕಡೆಗಣಿಸಲ್ಪಟ್ಟಿದ್ದ ಪ್ರಣಯ್ ಅವರು‌ ಬಿಎಐ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

‘ಅರ್ಜುನಪ್ರಶಸ್ತಿ, ಅದೇ ಹಳೆ ಕಥೆ. ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದವರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ. ಇಂಥ ಪ್ರಮುಖ ಕೂಟಗಳಲ್ಲಿ ಆಡದ ವ್ಯಕ್ತಿಯನ್ನು ಶಿಫಾರಸು ಮಾಡಿದ್ದೀರಿ #ವಾ# ದಿಸ್‌ ಕಂಟ್ರಿ ಈಸ್‌ ಎ ಜೋಕ್‌’ ಎಂದು ಟ್ವಿಟರ್‌ನಲ್ಲಿ ಬರೆದಿದ್ದರು.

‘ಪ್ರಣಯ್‌ ಅವರು ಶಿಸ್ತು ಉಲ್ಲಂಘಿಸಿದ ಹಲವು ಉದಾಹರಣೆಗಳಿವೆ. ಫೆಡರೇಷನ್‌ ಇದನ್ನೆಲ್ಲ ಸಹಿಸಿಕೊಂಡಿದೆ. ಆದರೆ ಇತ್ತೀಚೆಗೆ ಅವರ ನಡವಳಿಕೆಯು ಅವರ ವಿರುದ್ಧ ಕ್ರಮ ಜರುಗಿಸಲು ಕಾರಣವಾಗಿದೆ. ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಪ್ರಣಯ್‌ ಉತ್ತರ ನೀಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಜಯ್‌ ಸಿಂಘಾನಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.