ADVERTISEMENT

ನ್ಯಾಯಾಲಯದ ಮೊರೆ ಹೋಗಲು ಬಜರಂಗ್‌ ಚಿಂತನೆ

ರಾಜೀವ್‌ ಗಾಂಧಿ ಖೇಲ್‌ ರತ್ನ ಪುರಸ್ಕಾರಕ್ಕೆ ಹೆಸರು ಪರಿಗಣಿಸದಿದ್ದಕ್ಕೆ ಬೇಸರ

ಪಿಟಿಐ
Published 20 ಸೆಪ್ಟೆಂಬರ್ 2018, 14:54 IST
Last Updated 20 ಸೆಪ್ಟೆಂಬರ್ 2018, 14:54 IST
ಬಜರಂಗ್‌ ಪೂನಿಯಾ
ಬಜರಂಗ್‌ ಪೂನಿಯಾ   

ನವದೆಹಲಿ: ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪುರಸ್ಕಾರಕ್ಕೆ ತಮ್ಮ ಹೆಸರನ್ನು ಪರಿಗಣಿಸದಿರುವ ಕೇಂದ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕುಸ್ತಿ‍ಪಟು ಬಜರಂಗ್‌ ಪೂನಿಯಾ ಚಿಂತನೆ ನಡೆಸಿದ್ದಾರೆ.

ಬಜರಂಗ್‌ ಅವರು ಈ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ), ಅವರ ಹೆಸರನ್ನು ಖೇಲ್‌ ರತ್ನ ‍ಗೌರವಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ಪುರಸ್ಕಾರ ನೀಡಲು ತೀರ್ಮಾನಿಸಿತ್ತು.

‘ಖೇಲ್‌ ರತ್ನ ಪ್ರಶಸ್ತಿಯಿಂದ ನನ್ನ ಹೆಸರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರದ ಈ ಕ್ರಮದಿಂದ ತುಂಬಾ ನೋವಾಗಿದೆ. ಈ ಸಂಬಂಧ ಶುಕ್ರವಾರ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ಬಜರಂಗ್‌ ತಿಳಿಸಿದ್ದಾರೆ.

ADVERTISEMENT

‘ರಾಜ್ಯವರ್ಧನ್‌ ಅವರ ಭೇಟಿ ಫಲ‍ಪ್ರದವಾಗುವ ವಿಶ್ವಾಸವಿದೆ. ಒಂದೊಮ್ಮೆ ಅವರಿಂದ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ’ ಎಂದಿದ್ದಾರೆ.

‘ಹಿಂದಿನ ನಾಲ್ಕು ವರ್ಷಗಳಿಂದ ಸ್ಥಿರ ಸಾಮರ್ಥ್ಯ ತೋರುತ್ತಿದ್ದೇನೆ. ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದೇನೆ. ಹೀಗಾಗಿ ಈ ಬಾರಿ ಖೇಲ್‌ ರತ್ನ ಪ್ರಶಸ್ತಿ ಸಿಗುವ ವಿಶ್ವಾಸ ಇತ್ತು. ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರಿಂದ ತುಂಬಾ ನೋವಾಗಿದೆ’ ಎಂದು ಹೇಳಿದ್ದಾರೆ.

‘ಇದು ನನ್ನ ವೈಯಕ್ತಿಕ ಹೋರಾಟ. ಇದರಲ್ಲಿ ಕುಸ್ತಿ ಫೆಡರೇಷನ್‌ನ ಪಾತ್ರ ಏನು ಇಲ್ಲ. ಹೆಸರು ಶಿಫಾರಸು ಮಾಡುವುದು ಡಬ್ಲ್ಯುಎಫ್‌ಐ ಜವಾಬ್ದಾರಿ. ಅದನ್ನು ಫೆಡರೇಷನ್‌ ನಿಭಾಯಿಸಿದೆ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.