ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್: ಬಜರಂಗ್‌, ರವಿಗೆ ಒಲಿಂಪಿಕ್ಸ್‌ ರಹದಾರಿ

ಸೆಮಿಯಲ್ಲಿ ಸೋತ ಭಾರತದ ಪೈಲ್ವಾನರು

ಪಿಟಿಐ
Published 19 ಸೆಪ್ಟೆಂಬರ್ 2019, 20:50 IST
Last Updated 19 ಸೆಪ್ಟೆಂಬರ್ 2019, 20:50 IST
ಭಾರತದ ಬಜರಂಗ್‌ ಪುನಿಯಾ (ಕೆಂಪು ಪೋಷಾಕು) ಮತ್ತು ಸ್ಲೊವೇನಿಯಾದ ಡೇವಿಡ್‌ ಹಬಟ್‌ ನಡುವಣ ಪೈಪೋಟಿ –ಪಿಟಿಐ ಚಿತ್ರ
ಭಾರತದ ಬಜರಂಗ್‌ ಪುನಿಯಾ (ಕೆಂಪು ಪೋಷಾಕು) ಮತ್ತು ಸ್ಲೊವೇನಿಯಾದ ಡೇವಿಡ್‌ ಹಬಟ್‌ ನಡುವಣ ಪೈಪೋಟಿ –ಪಿಟಿಐ ಚಿತ್ರ   

ನೂರ್‌ ಸುಲ್ತಾನ್‌, ಕಜಕಸ್ತಾನ: ಭಾರತದ ಬಜರಂಗ್‌ ಪುನಿಯಾ ಮತ್ತು ರವಿಕುಮಾರ್‌ ದಹಿಯಾ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಆದರೆ ಚಿನ್ನದ ಪದಕ ಗೆಲ್ಲಲು ಇಬ್ಬರೂ ವಿಫಲರಾಗಿದ್ದಾರೆ.

‍ಗುರುವಾರ ನಡೆದ 65 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಬಜರಂಗ್‌ ಅವರು ಕಜಕಸ್ತಾನದ ದೌಲತ್‌ ನಿಯಾಜ್‌ಬೆಕೊವ್‌ ಎದುರು ಸೋತರು. ಈ ‘ಬೌಟ್‌’ ವಿವಾದದ ರೂಪ ಪಡೆದುಕೊಂಡಿತು.

ADVERTISEMENT

ಆರು ನಿಮಿಷಗಳ ಈ ಹಣಾಹಣಿ 9–9ರಿಂದ ‘ಟೈ’ ಆಗಿತ್ತು. 2–7ರಿಂದ ಹಿಂದಿದ್ದ ದೌಲತ್‌, ಈ ಹಂತದಲ್ಲಿ ಬಿಗಿಪಟ್ಟು ಹಾಕಿ ಬಜರಂಗ್‌ ಅವರನ್ನು ನೆಲಕ್ಕುರುಳಿಸಿ ದ್ದರಿಂದ (ನಿಗದಿತ ವೃತ್ತದ ಅಂಚಿಗೆ) ಅವರಿಗೆ ನಾಲ್ಕು ಪಾಯಿಂಟ್ಸ್‌ ನೀಡಲಾಗಿತ್ತು. ಇದರ ಆಧಾರದಲ್ಲೇ ಕಜಕಸ್ತಾನದ ಕುಸ್ತಿಪಟುವನ್ನು ವಿಜಯಿ ಎಂದೂ ಘೋಷಿಸಲಾಯಿತು. ರೆಫರಿಗಳ ಈ ತೀರ್ಪಿನ ವಿರುದ್ಧ ಭಾರತದ ಕುಸ್ತಿಪಟು ಅಸಮಾಧಾನ ವ್ಯಕ್ತಪಡಿಸಿದರು.

ಬಜರಂಗ್‌ ಅವರ ತರಬೇತುದಾರ ಶಾಕೊ ಬನಿತಿದಿಸ್‌ ಅವರು ಕೋಚ್‌ಗಳ ‘ಬ್ಲಾಕ್‌’ಗೆ ಕಾಲಿನಿಂದ ಜಾಡಿಸಿ ಒದ್ದು ತಮ್ಮ ಸಿಟ್ಟು ಹೊರಹಾಕಿದ್ದರು.

ಬೌಟ್‌ನ ವೇಳೆ ವಿಪರೀತ ದಣಿದಿದ್ದ ದೌಲತ್‌ಗೆ ಸುಧಾರಿಸಿಕೊಳ್ಳಲು ಹೆಚ್ಚು ಸಮಯ ನೀಡಿದ್ದ ರೆಫರಿಗಳು, ಆತಿಥೇಯ ಪೈಲ್ವಾನ ತಪ್ಪು ಎಸಗಿದರೂ ಎಚ್ಚರಿಕೆ ನೀಡಿರಲಿಲ್ಲ. ಈ ಸಂಬಂಧ ಬಜರಂಗ್‌ ಹಲವು ಸಲ ದೂರಿದರೂ ‍ಪ್ರಯೋಜನವಾಗಲಿಲ್ಲ.

ಕ್ವಾರ್ಟರ್‌ ಫೈನಲ್‌ನಲ್ಲಿ ಬಜರಂಗ್‌ 8–1 ಪಾಯಿಂಟ್ಸ್‌ನಿಂದ ಉತ್ತರ ಕೊರಿಯಾದ ಜೊಂಗ್‌ ಚೊಲ್‌ ಸನ್‌ ಅವರನ್ನು ಪರಾಭವಗೊಳಿಸಿದ್ದರು.

ಮೊದಲ ಸುತ್ತಿನಲ್ಲಿ ಪೋಲೆಂಡ್‌ನ ಕ್ರಜಿಸ್ಜ್‌ಟೊಫ್‌ ಬೀನ್‌ಕೌವಸ್ಕಿ ಎದುರು 9–2ರಿಂದ ಗೆದ್ದಿದ್ದ ಭಾರತ ಪೈಲ್ವಾನ, ಪ್ರೀ ಕ್ವಾರ್ಟರ್‌ನಲ್ಲಿ 3–0ರಿಂದ ಸ್ಲೊವೇನಿಯಾದ ಡೇವಿಡ್‌ ಹಬಟ್‌ ಅವರನ್ನು ಮಣಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸಲ ಪಾಲ್ಗೊಂಡಿರುವ ರವಿಕುಮಾರ್‌, 57 ಕೆ.ಜಿ.ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ 4–6 ಪಾಯಿಂಟ್ಸ್‌ನಿಂದ ರಷ್ಯಾದ ಜವುರ್‌ ಉಗುಯೆವ್‌ ಎದುರು ನಿರಾಸೆ ಕಂಡರು.

ಕ್ವಾರ್ಟರ್‌ ಫೈನಲ್‌ನಲ್ಲಿ ರವಿ 6–1 ಪಾಯಿಂಟ್ಸ್‌ನಿಂದ ಯೂಕಿ ಟಕಹಾಶಿಗೆ ಆಘಾತ ನೀಡಿದ್ದರು.

ಜಪಾನ್‌ನ ಯೂಕಿ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ. 2017ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.

ಮೊದಲ ಸುತ್ತಿನ ಪೈಪೋಟಿಯಲ್ಲಿ 11–0 ಪಾಯಿಂಟ್ಸ್‌ನಿಂದ ದಕ್ಷಿಣ ಕೊರಿಯಾದ ಸಂಗ್‌ವೊನ್‌ ಕಿಮ್‌ ಅವರನ್ನು ಸೋಲಿಸಿದ್ದ ರವಿಕುಮಾರ್‌, ನಂತರ 17–6ರಿಂದ ಅರ್ಮೇನಿಯಾದ ಅರ್ಸೆನ್‌ ಹರುತುನ್ಯಾನ್‌ ಎದುರು ಜಯಿಸಿದ್ದರು. ಆರಂಭದಲ್ಲಿ 0–6ರಿಂದ ಹಿಂದಿದ್ದ ರವಿ, ನಂತರ ಒಟ್ಟು 17 ಪಾಯಿಂಟ್ಸ್‌ ಕಲೆಹಾಕಿದರು.

ಸಾಕ್ಷಿಗೆ ನಿರಾಸೆ: ಮಹಿಳೆಯರ 62 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಸಾಕ್ಷಿ ಮಲಿಕ್, ಮೊದಲ ಸುತ್ತಿನಲ್ಲೇ ಸೋತರು.

ನೈಜೀರಿಯಾದ ಅಮಿನತ್‌ ಅದೆನಿಯಿ 10–7ರಿಂದ ಸಾಕ್ಷಿ ಅವರನ್ನು ಮಣಿಸಿದರು.

68 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ದಿವ್ಯಾ ಕಕ್ರಾನ್‌ ಕೂಡ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಜಪಾನ್‌ನ ಸಾರಾ ದೊಶೊ 2–0ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.