ನವದೆಹಲಿ: ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಹಿರಿಯ ಕೋಚ್ ನರೇಶ್ ದಹಿಯಾ ಅವರಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿಕಟಪೂರ್ವ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸಿದ್ದ ಧರಣಿಯ ಸಂದರ್ಭದಲ್ಲಿ ಬಜರಂಗ್ ಅವರು ನರೇಶ್ ಅವರನ್ನು ದೂಷಿಸಿದ್ದರು.
ಜೂನಿಯರ್ ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದ ಬಜರಂಗ್, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು 2023ರ ಮೇ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ಧರಣಿಯಲ್ಲಿ ‘ನರೇಶ್ ದಹಿಯಾ ಅಥ್ಯಾಚಾರ ಆರೋಪಿಯಾಗಿದ್ದು, ನಮ್ಮ ಪ್ರತಿಭಟನೆಯನ್ನು ಪ್ರಶ್ನಿಸುವ ಹಕ್ಕು ಅವರಿಗಿಲ್ಲ’ ಎಂದು ಬಜರಂಗ್ ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ನರೇಶ್ ಅವರು ಬಜರಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈಚೆಗೆ ಬಜರಂಗ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕನೇ ವಿಚಾರಣೆ ಸಂದರ್ಭದಲ್ಲಿ ಅವರಿಗೆ ಬೇಲ್ ಕೂಡ ನೀಡಲಾಗಿತ್ತು. 12 ದಿನಗಳ ಹಿಂದಷ್ಟೇ ಬಜರಂಗ್ ಅವರು ನರೇಶ್ ಅವರಿಗೆ ಬೇಷರತ್ ಕ್ಷಮೆಯಾಚಿಸಿದ್ದರು.
‘ಜಂತರ್ ಮಂತರ್‌ನಲ್ಲಿ ನಡೆದಿದ್ದ ಧರಣಿಯ ವೇಳೆಯ ಪತ್ರಿಕಾಗೋಷ್ಠಿಯಲ್ಲಿ ನರೇಶ್ ವಿರುದ್ಧ ತಪ್ಪು ಮತ್ತು ಅಸೂಕ್ಷ್ಮ ಹೇಳಿಕೆ ನೀಡಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯಿಂದ ನರೇಶ್ ಅವರಿಗೆ ಉಂಟಾಗಿರುವ ನೋವು ಮತ್ತು ಅವರ ವ್ಯಕ್ತಿತ್ವಕ್ಕಾಗಿರುವ ಹಾನಿಗೆ ವಿಷಾದವಿದೆ. ಅವರೊಬ್ಬ ನುರಿತ ಮತ್ತು ಉತ್ತಮ ಕೋಚ್ ಆಗಿದ್ದಾರೆ. ದೇಶಕ್ಕಾಗಿ ಅವರು ಉತ್ತಮ ಕಾಣಿಕೆ ನೀಡಿದ್ದಾರೆ’ ಎಂದು ಬಜರಂಗ್ ನೀಡಿರುವ ಕ್ಷಮಾಪಣೆ ಪತ್ರವು ಪಿಟಿಐಗೆ ಲಭ್ಯವಾಗಿದೆ.
ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ದಹಿಯಾ ಅವರ ಚೋಟುರಾಮ್ ವ್ಯಾಯಾಮಶಾಲಾ ಅಖಾಡ ಇದೆ. ಅಲ್ಲಿ ಅವರು ಪುರುಷ ಕುಸ್ತಿಪಟುಗಳಿಗೆ ತಾಲೀಮು ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ. ವಿನೋದ್ (55 ಕೆ.ಜಿ) ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ರಮೇಶ್ ಗುಲಿಯಾ (74ಕೆಜಿ) ಅವರು 2005ರಲ್ಲಿ ಸುಶೀಲ್ ಕುಮಾರ್ ಅವರನ್ನು ಮಣಿಸಿದ್ದರು. ರವೀಂದ್ರ (65 ಕೆಜಿ) ಮತ್ತು ಅಭಿಷೇಕ್ (61ಕೆಜಿ) ಅವರು ಕೂಡ ದಹಿಯಾ ತಾಲೀಮಿನಲ್ಲಿ ಬೆಳೆದವರಾಗಿದ್ದಾರೆ.
‘ಅವರು (ಬಜರಂಗ್) ಸಲ್ಲಿಸಿರುವ ಕ್ಷಮಾಪಣೆಯನ್ನು ನಾನು ಸ್ವೀಕರಿಸಿದ್ದೇನೆ. ಅವರ ವಕೀಲರು ನನ್ನ ವಕೀಲರೊಂದಿಗೆ ಮಾತನಾಡಿದ್ದಾರೆ. ಬ್ರಿಜ್‌ಭೂಷಣ್ ಅವರೊಂದಿಗೆ ನನಗೆ ಹೆಚ್ಚಿನ ಸಂಪರ್ಕ ಇಲ್ಲ. ಕುಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ 3–4 ಸಲ ಫೆಡರೇಷನ್ ಕಚೇರಿಗೆ ಭೇಟಿ ನೀಡಿದ್ದೆ. ಅವೆಲ್ಲವೂ ಸಹಜ ಪ್ರಕ್ರಿಯೆ’ ಎಂದು ನರೇಶ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.