ADVERTISEMENT

ಬ್ಯಾಡ್ಮಿಂಟನ್‌ನಲ್ಲಿ ಬೆಳಗುತ್ತಿರುವ ಗ್ರಾಮೀಣ ಪ್ರತಿಭೆ ಜಯಲಕ್ಷ್ಮಿ

ಬಡತನ ಮೆಟ್ಟಿ ನಿಂತು ತಂದೆ ಕನಸು ಈಡೇರಿಸಿದ ಕುವರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:34 IST
Last Updated 13 ನವೆಂಬರ್ 2020, 1:34 IST
'ಕ್ರೀಡಾರತ್ನ' ಪ್ರಶಸ್ತಿ ಜತೆಗೆ ಜಯಲಕ್ಷ್ಮಿ
'ಕ್ರೀಡಾರತ್ನ' ಪ್ರಶಸ್ತಿ ಜತೆಗೆ ಜಯಲಕ್ಷ್ಮಿ   

ಬಂಟ್ವಾಳ: ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳಗುತ್ತಿರುವ ಗ್ರಾಮೀಣ ಪ್ರತಿಭೆ ತಾಲ್ಲೂಕಿನ ಕಡೇಶ್ವಾಲ್ಯದ ಜಯಲಕ್ಷ್ಮಿ ಗಾಣಿಗ. ಸತತ ನಾಲ್ಕು ಬಾರಿ ರಾಷ್ಟ್ರ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ, ಅಂತರ್ ಝೋನ್‌ ಚಾಂಪಿಯನ್ ಆಗಿರುವ, ದಕ್ಷಿಣ ಕನ್ನಡ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಹೆಗ್ಗಳಿಕೆ ಈಕೆಯದಾಗಿದೆ.

ಕಡೇಶ್ವಾಲ್ಯ ಪೆರ್ಲಾಪು ಗಾಣದಮನೆಯ ದಿವಂಗತ ವಿಶ್ವನಾಥ ಸಪಲ್ಯ ಮತ್ತು ರೇವತಿ ದಂಪತಿ ಜಯಲಕ್ಷ್ಮಿ, ಕಡೇಶ್ವಾಲ್ಯದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿತವರು. ಪಿಯುಸಿ ಓದಲು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಪ್ರವೇಶ ಪಡೆದು, ಇದೇ ಸಂಸ್ಥೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಬಾಲ್‌ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ತಂದೆ ನಿಧನರಾದ ನೋವಿನ ನಡುವೆಯೂ ಚೆನ್ನೈಗೆ ತೆರಳಿ ರಾಷ್ಟ್ರೀಯ ಮಟ್ಟದ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ‘ಬೆಸ್ಟ್ ಪ್ಲೇಯರ್ ಪ್ರಶಸ್ತಿ’ ಗೆದ್ದು ಅಚ್ಚರಿ ಮೂಡಿಸಿದ್ದರು. ತೀರಾ ಬಡತನದ ನಡುವೆಯೂ ಈಕೆ, ತಂದೆ ಕಂಡ ಕನಸು ಈಡೇರಿಸಿದ ಹೆಮ್ಮೆ ಹೊಂದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸತತ ಮೂರು ಬಾರಿ ಹಿರಿಯ ವಿಭಾಗ ಮತ್ತು ಮೂರು ಬಾರಿ ಫೆಡರೇಶನ್ ಕಪ್ ಚಾಂಪಿಯನ್ ಷಿಪ್, ಹರಿಯಾಣದಲ್ಲಿ ನಡೆದ ಹಿರಿಯ ವಿಭಾಗದ ಸ್ಪರ್ಧೆಯಲ್ಲಿ 'ಸ್ಟಾರ್ ಆಫ್ ಇಂಡಿಯಾ' ಪ್ರಶಸ್ತಿ ಪಡೆದಿದ್ದಾರೆ.

ADVERTISEMENT

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 2017ನೇ ಸಾಲಿನ ‘ಕ್ರೀಡಾರತ್ನ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ‘ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಗುವ ಪ್ರೋತ್ಸಾಹ ಮತ್ತು ಅಲ್ಲಿಯೇ ಕೋಚ್ ಆಗಿರುವ ಕಾರಣ ಮತ್ತಷ್ಟು ಸಾಧನೆ ಮಾಡುವ ಹಂಬಲ ಇದೆ’ ಎಂದು ಜಯಲಕ್ಷ್ಮಿ ಗಾಣಿಗ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.